ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news): ಮುರ್ಡೇಶ್ವರ (Murdeshwara) :  ​ಚಲಿಸುತ್ತಿದ್ದ ರೈಲಿನಿಂದ ಕೆಳಗಿಳಿಯಲು ಹೋಗಿ ರೈಲು(Train) ಮತ್ತು ಪ್ಲಾಟ್‌ಫಾರ್ಮ್(Platform) ಮಧ್ಯೆ ಸಿಲುಕಿಕೊಳ್ಳುತ್ತಿದ್ದ ಪ್ರಯಾಣಿಕನೊಬ್ಬನನ್ನು ತನ್ನ ಸಮಯಪ್ರಜ್ಞೆ ಮತ್ತು ಧೈರ್ಯದಿಂದ ಬದುಕಿಸಿದ(Rescue) ಕೊಂಕಣ ರೈಲ್ವೆಯ ಮುರ್ಡೇಶ್ವರ (MRDW) ನಿಲ್ದಾಣದ ಪಾಯಿಂಟ್ಸ್‌ಮನ್ ಗಣಪತಿ ನಾಯ್ಕ ಅವರ ಸಾಹಸ ಕಾರ್ಯ  ಪ್ರಶಂಸೆಗೆ ಪಾತ್ರವಾಗಿದೆ.

​ಮುರ್ಡೇಶ್ವರ ರೈಲ್ವೆ ನಿಲ್ದಾಣಕ್ಕೆ(Murdeshwar Railway Station) ಆಗಮಿಸಿದ ರೈಲು ಸಂಖ್ಯೆ 16312 ಅಪ್ ಬೆಳಿಗ್ಗೆ 07:56 ರ ಸುಮಾರಿಗೆ ನಿಲ್ದಾಣದಿಂದ ಹೊರಡುತ್ತಿದ್ದಾಗ, ಮೊಹಮ್ಮದ್ ಗೌಫುರ್ (22) ಎಂಬ ಪ್ರಯಾಣಿಕನು ಚಲಿಸುತ್ತಿದ್ದ ರೈಲಿನಿಂದ ಕೆಳಗಿಳಿಯಲು ಯತ್ನಿಸಿದ್ದಾನೆ. ಈ ವೇಳೆ ಆಯತಪ್ಪಿದ ಆತ ರೈಲಿನೊಂದಿಗೆ ಎಳೆಯಲ್ಪಟ್ಟಿದ್ದಾನೆ. ​ಇದನ್ನು  ಗಮನಿಸಿದ ಆನ್-ಡ್ಯೂಟಿ ಪಾಯಿಂಟ್ಸ್‌ಮನ್(On Duty Pointsman)  ಗಣಪತಿ ನಾಯ್ಕ, ಕ್ಷಣಾರ್ಧವೂ ತಡಮಾಡದೆ ಸ್ಥಳಕ್ಕೆ ಧಾವಿಸಿದ್ದಾರೆ. ಅತ್ಯಂತ ಧೈರ್ಯದಿಂದ ಪ್ರಯಾಣಿಕನನ್ನು ಗಟ್ಟಿಯಾಗಿ ಹಿಡಿದು, ಆತ ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವಿನ ಗ್ಯಾಪ್‌ಗೆ ಜರುಗದಂತೆ ತಡೆದಿದ್ದಾರೆ. ರೈಲು ಸಂಪೂರ್ಣವಾಗಿ ನಿಲ್ಲುವವರೆಗೂ ಪ್ರಯಾಣಿಕನಿಗೆ ಯಾವುದೇ ಅಪಾಯವಾಗದಂತೆ ರಕ್ಷಿಸುವ ಮೂಲಕ ದೊಡ್ಡ ದುರಂತವೊಂದನ್ನು ತಪ್ಪಿಸಿದ್ದಾರೆ.

​ಗಣಪತಿ ನಾಯ್ಕ ಅವರ ಈ ಶ್ಲಾಘನೀಯ ಕರ್ತವ್ಯ ನಿಷ್ಠೆ ಮತ್ತು ಸಮಯಪ್ರಜ್ಞೆಯನ್ನು ಕೊಂಕಣ ರೈಲ್ವೆಯ ವ್ಯವಸ್ಥಾಪಕ ನಿರ್ದೇಶಕ (CMD) ಮತ್ತು ಅಧ್ಯಕ್ಷ ಸಂತೋಷ್ ಕುಮಾರ್ ಝಾ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಸಂಸ್ಥೆಯ ಅತ್ಯುನ್ನತ ಸುರಕ್ಷತಾ ಮಾನದಂಡಗಳನ್ನು ಎತ್ತಿಹಿಡಿದ ಗಣಪತಿ ನಾಯ್ಕ ಅವರಿಗೆ ₹10,000 ನಗದು ಬಹುಮಾನವನ್ನು ಘೋಷಿಸಿದ್ದಾರೆ..

​ಕೊಂಕಣ ರೈಲ್ವೆಯ(Konkan Railway) ಕಾರವಾರದ ವಲಯ ಮೇಲ್ವಿಚಾರಕ ಸಂಜೀವ ಪೆಡ್ನೇಕರ್ (AS/KAWR) ಸಿಎಂಡಿ ಅವರ ಪರವಾಗಿ ಪಾಯಿಂಟ್ಸ್‌ಮನ್ ಗಣಪತಿ ನಾಯ್ಕ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ, ₹10,000 ನಗದು ಪ್ರಶಸ್ತಿ ಹಾಗೂ ಶುಭ ಹಾರೈಕೆಗಳನ್ನು ಹಸ್ತಾಂತರಿಸಿದರು.

​ಕೊಂಕಣ ರೈಲ್ವೆಯ ಮಂಗಳೂರು ವಿಭಾಗದ ಸಾರ್ವಜನಿಕ ಸಂಪರ್ಕ ವ್ಯವಸ್ಥಾಪಕಿ (Manager Public Relations) ಕೆ. ಸುಧಾ ಕೃಷ್ಣಮೂರ್ತಿ ಅವರು ಪಾಯಿಂಟ್ಸ್‌ಮನ್ ಅವರ ಈ ಕಾರ್ಯ ಇಡೀ ರೈಲ್ವೆ ಇಲಾಖೆಗೆ(Railway Department) ಹೆಮ್ಮೆ ತಂದಿದೆ ಎಂದು ತಿಳಿಸಿದ್ದಾರೆ.