ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news): ಕಾರವಾರ(Karwar) :   ಇಲ್ಲಿನ ಬೈತಖೋಲ್ ವಾಣಿಜ್ಯ ಬಂದರಿನಲ್ಲಿ(Commercial Port) ಡಾಂಬರು ಖಾಲಿ ಮಾಡುತ್ತಿದ್ದ  ಹಡಗಿನಿಂದ ಬಿಸಿಯಾದ ಡಾಂಬರು ಸೋರಿಕೆಯಾಗಿದ್ದು(Bitumin Leakage), ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ತಪ್ಪಿದ ಘಟನೆ ಶನಿವಾರ ಸಂಭವಿಸಿದೆ.

ಎಂಎಂಸಿಎಲ್ ಅಲಿಗದ್ಧಾ(MMCL Aligadda) ಕಂಪನಿಗೆ ಸೇರಿದ ಹಡಗಿನಿಂದ ಡಾಂಬರು ಖಾಲಿ ಮಾಡುವ ಕಾರ್ಯ ನಡೆಯುತ್ತಿದ್ದ ವೇಳೆ, ಸುಮಾರು 300 ಟನ್ ಡಾಂಬರು ಇನ್ನೂ ಹಡಗಿನಲ್ಲಿ ಉಳಿದಿದ್ದಾಗ ಈ ಘಟನೆ ನಡೆದಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಡಾಂಬರು ಸಾಗಿಸುವ ಪೈಪ್ ಒಳಗೆ ನೀರು ಸೇರಿದ್ದರಿಂದ ಒತ್ತಡ ಹೆಚ್ಚಾಗಿ ಬಿಸಿಯಾದ ಡಾಂಬರು ಹೊರಕ್ಕೆ ಚಿಮ್ಮಿ ಸಮುದ್ರಕ್ಕೆ ಹರಿದಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಸಮುದ್ರಕ್ಕೆ ಬಿದ್ದ ಬಿಸಿ ಡಾಂಬರನ್ನು ನಿಯಂತ್ರಿಸಲು ಬಂದರು ಅಧಿಕಾರಿಗಳು ತಕ್ಷಣ ಕಾರ್ಯಾಚರಣೆ ನಡೆಸಿದರು. ಡಾಂಬರಿನ ಮೇಲ್ಭಾಗಕ್ಕೆ ನೀರು ಸುರಿದು ತಣ್ಣಗಾದ ಬಳಿಕ ಅದನ್ನು ಮೇಲಕ್ಕೆತ್ತುವ ಕಾರ್ಯ ಕೈಗೊಳ್ಳಲಾಯಿತು.

ಘಟನೆಯಿಂದ ಸಾಕಷ್ಟು ಪ್ರಮಾಣದ ಡಾಂಬರು ಸಮುದ್ರ ಸೇರಿರುವ ಹಿನ್ನೆಲೆಯಲ್ಲಿ ಸಮುದ್ರ ಮಾಲಿನ್ಯ(Sea Pollution) ಉಂಟಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಘಟನೆ ಕುರಿತು ಸಂಬಂಧಿತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಡಾಂಬರು ಸೋರಿಕೆಗೆ ನಿಖರ ಕಾರಣವೇನು ಎಂಬುದು ತನಿಖೆಯಿಂದ ತಿಳಿಯಬೇಕಿದೆ.