ಶಿರಸಿ(SIRSI) : ಕೊಲೆ ಪ್ರಕರಣದಲ್ಲಿ ಆರೋಪಿಯೋರ್ವನಿಗೆ ಜೀವಾವಧಿ ಶಿಕ್ಷೆ ವಿಧಿಸಿ, ಶಿರಸಿ ನಗರದ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ಹಳಿಯಾಳ(HALIYAL) ನಗರದ ಗಾಂಧಿಕೇರಿಗಲ್ಲಿಯ ಸುಭಾಷ ನಾಗಪ್ಪ ಮಾದರಗೆ ಜೀವಾವಧಿ ಶಿಕ್ಷೆ, 27 ಸಾವಿರ ರು. ದಂಡ ಹಾಗು 50 ಸಾವಿರ ರು. ಮೃತರ ಅವಲಂಬಿತರಾದ ಮಕ್ಕಳಿಗೆ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.

ಹಳಿಯಾಳ ಗಾಂಧಿಕೇರಿಗಲ್ಲಿಯ ಸುಭಾಷ 07.02.2007ರಲ್ಲಿ ಮದುವೆ ಮಾಡಿಕೊಂಡಿದ್ದನು. ನಂತರ ಹೆಂಡತಿ ಶೀಲದ ಬಗ್ಗೆ ಸಂಶಯ ಪಟ್ಟು ಪದೇ ಪದೇ ಕಿರುಕುಳ ನೀಡುತ್ತಿದ್ದರಿಂದ ಆತನ ಪತ್ನಿ 05.04.2017 ರಂದು ತನ್ನ ಎರಡು ಸಣ್ಣ ಮಕ್ಕಳೊಂದಿಗೆ ತವರು ಮನೆಗೆ ಹೋಗಿ ಜೀವನ ನಡೆಸುತ್ತಿದ್ದಳು. ಆದರೆ ಸುಭಾಷ 06.05.2017ರಂದು ಪತ್ನಿಯ ತವರು ಮನೆಗೆ ಹೋಗಿ ಒಳ್ಳೆಯ ರೀತಿಯಿಂದ ನೋಡಿಕೊಳ್ಳುವುದಾಗಿ ಹೇಳಿ 20 ರು.ಗಳ ಬಾಂಡ್ ಪೇಪರ್ ಮೇಲೆ ಒಪ್ಪಿಗೆ ಕರಾರ ಮಾಡಿಕೊಂಡು ಇಬ್ಬರು ಮಕ್ಕಳೊಂದಿಗೆ ಪತ್ನಿಯನ್ನು ತನ್ನ ಮನೆಗೆ ಕರೆದುಕೊಂಡು ಬಂದಿದ್ದ.

19.05.2017ರಂದು ಬೆಳಗ್ಗೆ 11.15 ಗಂಟೆಗೆ ಪತ್ನಿಯು ಅಡುಗೆ ಮನೆಯಲ್ಲಿ ಇದ್ದಾಗ ಅಡುಗೆ ಮನೆಯಲ್ಲಿದ್ದ ಪ್ಲಾಸ್ಟಿಕ್ ಕ್ಯಾನ್‌ನಲ್ಲಿದ್ದ ಸೀಮೆಎಣ್ಣೆಯನ್ನು ಮೈಮೇಲೆ ಸುರಿದು  ಬೆಂಕಿ ಹಚ್ಚಿದ್ದಲ್ಲದೇ ಈ ವಿಷಯ ಯಾರಿಗಾದರೂ ತಿಳಿಸಿದರೆ ಮಕ್ಕಳನ್ನು ಗೋವಾ ಬೀಚ್‌ನಲ್ಲಿ(GOA BEACH) ಹಾಕಿ ಸುಡುತ್ತೇನೆ ಎಂದು ಬೆದರಿಸಿದ್ದ,

ಹೆಂಡತಿ ಶೀಲದ ಬಗ್ಗೆ ಸಂಶಯ ಮಾಡಿ ಕೊಲೆ ಮಾಡಿದ್ದನು ಎಂದು ಹಳಿಯಾಳ ಪೊಲೀಸ್ ವೃತ್ತ ನಿರೀಕ್ಷಕ ಸುಂದ್ರೇಶ ಹೊಳೆವರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂದಿದ್ದರು.  ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಶಿರಸಿ ನಗರದ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಿರಣ ಕಿಣಿ ಪ್ರಕರಣದಲ್ಲಿರುವ ಸಾಕ್ಷ್ಯದಿಂದ ಅರೋಪಿತನಿಗೆ ಜೀವಾವಧಿ ಶಿಕ್ಷೆ ಹಾಗು ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಸರ್ಕಾರದ ಪರವಾಗಿ ಪಬ್ಲಿಕ್ ಪ್ರೊಸಿಕ್ಯೂಟರ್ ರಾಜೇಶ್. ಎಂ. ಮಳಗಿಕರ್ ಅವರು ಪ್ರಕರಣದ ವಿದ್ಯಮಾನಗಳನ್ನು ಮತ್ತು ಲಭ್ಯವಿದ್ದ ಸಾಕ್ಷಿದಾರರ ಸಾಕ್ಷ್ಯವನ್ನು ಗಂಭೀರವಾಗಿ ತೆಗೆದುಕೊಂಡು ಆರೋಪಿತನಿಗೆ ಶಿಕ್ಷೆ ವಿಧಿಸಬೇಕೆಂದು ತಮ್ಮ ಸುದೀರ್ಘ ವಾದ ಮಂಡಿಸಿದರು.