ಕಾರವಾರ: ಜಿಲ್ಲೆಯ ಕಾಳಿ ನದಿ ಜಲಾನಯನ ಭಾಗದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಕಾಳಿ ಯೋಜನೆಯ (KALI PROJECT) 1ನೇ ಹಂತ ಸೂಪಾ (SUPA DAM) ಆಣೆಕಟ್ಟೆಗೆ ಹೇರಳವಾಗಿ ನೀರು ಹರಿದು ಬರುತ್ತಿದೆ.
ಮಳೆ ಹೆಚ್ಚಾಗಿದ್ದರಿಂದ ಸೂಪಾ ಅಣೆಕಟ್ಟೆಯ ಜಲಾಶಯದ ನೀರಿನ ಮಟ್ಟವು ಸತತವಾಗಿ ಏರುತ್ತಿದೆ. ಜಲಾಶಯದ ಗರಿಷ್ಠ ಮಟ್ಟವು 564.00 ಮೀಟರ್ ಆಗಿದ್ದು, ಸೂಪಾ ಜಲಾಶಯದ ನೀರಿನ ಸಂಗ್ರಹಣ ಸಾಮರ್ಥ್ಯವು 147.55 ಟಿ.ಎಂ.ಸಿ ಇದೆ. ನೀರಿನ ಒಳ ಹರಿವಿನ ಪ್ರಮಾಣ ಸುಮಾರು 50 ಸಾವಿರ ಕ್ಯೂಸೆಕ್ ಅಧಿಕವಾಗಿದೆ. ಇದೇ ರೀತಿಯಲ್ಲಿ ಜಲಾಶಯಕ್ಕೆ ನೀರಿನ ಒಳ ಹರಿವು ಮುಂದುವರೆದಲ್ಲಿ ಜಲಾಶಯವು ಗರಿಷ್ಠ ಮಟ್ಟ ತಲುಪುವ ಸಾಧ್ಯತೆ ಇದೆ.
ಹೀಗಾಗಿ ಆಣೆಕಟ್ಟು ಸುರಕ್ಷತಾ ದೃಷ್ಟಿಯಿಂದ ಹೆಚ್ಚುವರಿಯಾದ ಜಲಾಶಯದ ನೀರನ್ನು ಯಾವುದೇ ಸಮಯದಲ್ಲಿ ಹೊರ ಬಿಡಲಾಗುವುದು. ಅಣೆಕಟ್ಟೆಯ ಕೆಳದಂಡೆಯಲ್ಲಿ ಹಾಗೂ ನದಿಯ ಪಾತ್ರದುದ್ದಕ್ಕೂ ವಾಸಿಸುತ್ತಿರುವ ಸಾರ್ವಜನಿಕರು ತಮ್ಮ ಜನ, ಜಾನುವಾರು ಇತ್ಯಾದಿಗಳೊಂದಿಗೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳ್ಳಬೇಕೆಂದು ತಿಳಿಸಲಾಗಿದೆ.
ಸೂಪಾ ಆಣೆಕಟ್ಟೆಯ ಕೆಳಭಾಗದ ನದಿ ಪಾತ್ರದಲ್ಲಿ ದೋಣಿ ಸಂಚಾರ. ಮೀನುಗಾರಿಕೆ, ಜಲಸಾಹಸ ಕ್ರೀಡಾ ಚಟುವಟಿಕೆಗಳನ್ನು ಮತ್ತು ಇತರೆ ಚಟುವಟಿಕೆಗಳನ್ನು ಮಳೆಗಾಲ ಮುಗಿಯುವವರೆಗೂ ನಡೆಸಬಾರದೆಂದು ಕಾರ್ಯ ನಿರ್ವಾಹಕ ಅಭಿಯಂತರರು(ಕಾ) ಸೂಪಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈಗಾಗಲೇ ಸುಪಾ ಆಣೆಕಟ್ಟು 555.63 ಮೀಟರ್ ನೀರು ಭರ್ತಿಯಾಗಿದೆ. ಇದು ಜಲಾಶಯದ ಒಟ್ಟು ಸಾಮರ್ಥ್ಯದ 77.14% ಆಗಿರುತ್ತದೆ. ಹೀಗಾಗಿ ಯಾವುದೇ ಸಂದರ್ಭದಲ್ಲಿ ನೀರು ಹೊರ ಬಿಡಬಹುದು. ಹೀಗಾಗಿ ಕಾಳಿ ನದಿ ತೀರದ ನಾಗರಿಕರು ಎಚ್ಚರ ವಹಿಸುವುದು ಅವಶ್ಯವಾಗಿದೆ.