ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಉಡುಪಿ(Udupi): ನಗರದಲ್ಲಿ ಮನೆ ಬಾಡಿಗೆ ಮುಂಗಡ ಹಣದ ವಿಚಾರದಲ್ಲಿ ಅಂಗಡಿ ಮಾಲೀಕರ ಮೇಲೆ ಆ್ಯಸಿಡ್ ಎರಚಿ ತಲವಾರಿನಿಂದ ಕೊಲೆ ಯತ್ನ ನಡೆಸಿದ ಘಟನೆ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ರೇಲ್ವೆ ನಿಲ್ದಾಣ ರಸ್ತೆ ಪಕ್ಕದಲ್ಲಿ ಅಂಗಡಿ ನಡೆಸುವ ಕುಂಜಿಬೆಟ್ಟುವಿನ(Kunjibettu) ನವೀನ್ ಕುಮಾರ್ (58) ಇವರು ವಿಷ್ಣುಮೂರ್ತಿ ನಗರದ ಮನೆಯ ಮೊದಲ ಮಹಡಿಯನ್ನ ಸುರೇಶ ಆಚಾರ್ಯ ಎಂಬುವವರಿಗೆ ಬಾಡಿಗೆ ನೀಡಿದ್ದರು. ಬಾಡಿಗೆದಾರ ಸುರೇಶ್ ಆಚಾರ್ಯ ಮನೆ ಖಾಲಿ ಮಾಡಿದ್ದರು. ಮನೆಗೆ ಮುಂಗಡ ನೀಡಿದ್ದ 20 ಸಾವಿರ ಹಣ ವಾಪಾಸ್ ಕೇಳಿದ್ದಾರೆ. ಮನೆ ಪರಿಶೀಲಿಸಿದಾಗ ಗೋಡೆ, ಟ್ಯಾಪ್ ಹಾಳಾಗಿದ್ದರಿಂದ ಮುಂಗಡದಲ್ಲಿ 2 ತಿಂಗಳ ಬಾಡಿಗೆ ಹಾಗೂ ದುರಸ್ತಿ ವೆಚ್ಚ ಕಡಿತಗೊಳಿಸಿ ಕೊಡುವುದಾಗಿ ಮನೆ ಮಾಲೀಕ ನವೀನ್ ಹೇಳಿದ್ದರು. ಇದಕ್ಕೆ ಒಪ್ಪದ ಸುರೇಶ್ ಆಚಾರ್ಯ ತಾನೂ ನೀಡಿದ 20 ಸಾವಿರ ಹಣ ವಾಪಸ್ ಕೊಡಬೇಕು ಎಂದು ಅ.23 ರಂದು ಅಂಗಡಿಗೆ ಬಂದು ಬೆದರಿಕೆ ಹಾಕಿ ಹೋಗಿದ್ದಾರೆ.
ನಿನ್ನೆ ಸಂಜೆ ಕಲ್ಕೂರು ಬಿಲ್ಡಿಂಗ್ನ ಅಂಗಡಿಯಲ್ಲಿ ಕೆಲಸ ಮಾಡುವಾಗ ಸುರೇಶ್ ಆಚಾರ್ಯ ಬಂದು ಮುಂಗಡ ಹಣದ ವಿಚಾರದಲ್ಲಿ ಏರು ಧ್ವನಿಯಲ್ಲಿ ಜಗಳ ಮಾಡಿ, ಹೊರಗೆ ಹೋಗಿ ಸ್ಕೂಟರ್ನಿಂದ ಡಬ್ಬ ಮತ್ತು ದೊಡ್ಡ ತಲ್ವಾರ್ ತಂದಿದ್ದಾನೆ. “ಇದು ಆಸಿಡ್, ಇದನ್ನು ಹಾಕಿ ಸುಟ್ಟು ಕೊಂದು ಬಿಡುತ್ತೇನೆ, ಆಮೇಲೆ ಕತ್ತಿಯಿಂದ ಕಡಿದು ಹಾಕುತ್ತೇನೆ” ಎಂದು ಬೆದರಿಸಿ, ಕೊಲ್ಲುವ ಉದ್ದೇಶದಿಂದ ಮೈಮೇಲೆ ಆಸಿಡ್ ಎರಚಿದ್ದಾನೆ ಎನ್ನಲಾಗಿದೆ.
ಆ್ಯಸಿಡ್ ದಾಳಿಯಿಂದ ನವೀನ್ ಕುಮಾರ್ ಅವರ ಬಲಗೈ, ಸೊಂಟ, ಹೊಟ್ಟೆ, ಪಾದ, ಮುಖ, ಎಡಗೈ ಸುಟ್ಟಿದೆ. ನಂತರ ಕತ್ತಿ ಹಿಡಿದು ಕಡಿಯಲು ಬಂದಾಗ ಅವರು ಅಡಗಿಕೊಂಡು ಪಾರಾಗಿದ್ದಾರೆ. ಗಾಯಗೊಂಡ ಅವರು ಕೆಎಂಸಿ (KMC) ಆಸ್ಪತ್ರೆಯ ಬರ್ನಿಂಗ್ ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಬಗ್ಗೆ ಉಡುಪಿ(Udupi) ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೆಲವೇ ಗಂಟೆಗಳಲ್ಲಿ ಆರೋಪಿ ಸುರೇಶ್ ಆಚಾರ್ಯ (48)ನನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯಿಂದ ಕೃತ್ಯಕ್ಕೆ ಬಳಸಿದ ಬಿಳಿ ಆಕ್ಟಿವ್ ವಾಹನ ಮತ್ತು ತಲವಾರ್ ವಶಪಡಿಸಿಕೊಳ್ಳಲಾಗಿದೆ.