ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ಕಳೆದ ಕೆಲ ದಿನಗಳಿಂದ ಭಟ್ಕಳ   ತಾಲ್ಲೂಕು ಆಸ್ಪತ್ರೆಯ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ಇಲ್ಲಿ ಕರ್ತವ್ಯ ನಿರ್ವಹಿಸುವ ನರ್ಸ್ ಗಳನ್ನ  ಶಿರಾಲಿ ಸಿ.ಎಚ್.ಸಿ.ಗೆ ತುರ್ತು ವರ್ಗಾವಣೆ ಮಾಡಿರುವುದರಿಂದ ರೋಗಿಗಳ ಮೇಲೆ ಪರಿಣಾಮ ಬೀರಿದೆ.

ಆರೋಗ್ಯ ಇಲಾಖೆ ಹೊರಡಿಸಿದ ಆದೇಶದಲ್ಲಿ ಒಟ್ಟೂ 17 ನರ್ಸ್‌ಗಳನ್ನು  ವರ್ಗಾವಣೆಗೊಳಿಸಲಾಗಿದೆ. ಇದರಲ್ಲಿ ಖಾಯಂ 8 ಮತ್ತು ಎನ್‌ಆರ್‌ಎಚ್‌ಎಂ ಅಡಿಯಲ್ಲಿ 9 ಸೇರಿ 17 ನರ್ಸ್‌ಗಳನ್ನು ವಾರದಲ್ಲಿ 3–4 ದಿನ ಶಿರಾಲಿ, ಉಳಿದ ದಿನಗಳಲ್ಲಿ ಭಟ್ಕಳದಲ್ಲಿ ಕರ್ತವ್ಯ ನಿರ್ವಹಿಸಬೇಕೆಂದು ಆದೇಶದಲ್ಲಿ  ತಿಳಿಸಲಾಗಿದೆ.

ಹಿಂದಿನ ಆಡಳಿತಾಧಿಕಾರಿ ಪ್ರಭಾವ ಆರೋಪ : ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ ಕೆಲಸದಲ್ಲಿದ್ದ ಪ್ರಭಾರಿ ಮ್ಯಾಟ್ರನ್ ವಿರುದ್ಧ ಅಸಮಾಧಾನ ಎದ್ದಿದೆ. 19 ನರ್ಸ್‌ಗಳು ಸಹಿ ಹಾಕಿ ಅವರನ್ನು ಬದಲಾಯಿಸುವಂತೆ ಮನವಿ ಸಲ್ಲಿಸಿರುವುದು ಬೆಳಕಿಗೆ ಬಂದಿದೆ. ಹಿಂದಿನ ಆಡಳಿತ ವೈದ್ಯಾಧಿಕಾರಿಗಳ ಪ್ರಭಾವದಲ್ಲಿ ನಿರ್ವಹಣೆ ನಡೆಯುತ್ತಿದೆ ಎನ್ನುವ ಗಂಭೀರ ಆರೋಪ ಕೇಳಿ ಬರುತ್ತಿದೆ. ತಾನು ಅಭಿವೃದ್ದಿಗೊಳಿಸಿದ ಆಸ್ಪತ್ರೆಯನ್ನ ಬಿಟ್ಟು ಹೋಗಲು ಅವರಿಗೆ ಮನಸ್ಸಿಲ್ಲ ಎಂದು ಭಟ್ಕಳದ ಹಲವು ವಾಟ್ಸಪ್ ಗ್ರೂಫ್ಗಳಲ್ಲಿ ಚರ್ಚೆ ಮುಂದುವರಿದಿದೆ.

ಔಷಧಿ ಪೂರೈಕೆಯಲ್ಲಿ ವ್ಯತ್ಯಯ: ತಾಲೂಕು ಆಸ್ಪತ್ರೆಯಲ್ಲಿ ಆಂತರಿಕ ಕಲಹ ತಾರಕಕ್ಕೇರುತ್ತಿದ್ದಂತೆ  ಔಷಧಿ ಪೂರೈಕೆ ಸಮರ್ಪಕವಾಗಿ ಆಗುತ್ತಿಲ್ಲ.  ಅಗತ್ಯ ಇಂಜೆಕ್ಷನ್‌ ಗಳು ಹಾಗೂ ಔಷಧಿಗಳು ಸಮಯಕ್ಕೆ ಸಿಗದೇ, ಗರ್ಭಿಣಿಯರು, ವೃದ್ಧರು, ಶಸ್ತ್ರಚಿಕಿತ್ಸೆಗೆ ಕಾಯುತ್ತಿರುವವರು ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ಇಲ್ಲಿಗೆ ಬಂದವರು ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ಹಿಂದಿನ ವೈದ್ಯಾಧಿಕಾರಿಗಳು  ವರ್ಗಾವಣೆಯ ವಿಚಾರದಲ್ಲಿ ಕಾನೂನು ಹೋರಾಟ ಆರಂಭಿಸಿದ್ದಾರೆ. ಇನ್ನೂ ಆಸ್ಪತ್ರೆಯ ಹಿಡಿತ ಕಾಪಾಡಿಕೊಳ್ಳಲು ಶಕ್ತಿ ಪ್ರಯೋಗಿಸುತ್ತಿದ್ದಾರೆ ಎಂಬ ಗುಸುಗುಸು ಪಿಸುಪಿಸು ಮಾತು ಕೇಳಿ ಬರುತ್ತಿದೆ. ಹಾಲಿ ವೈದ್ಯಾಧಿಕಾರಿ ಡಾ. ಅರುಣಕುಮಾರ ಎನ್.ಎ. ಅವರು ಆಡಳಿತ ಒತ್ತಡದಲ್ಲಿ  ಸಿಲುಕಿದ್ದಾರೆ. ಅವರ ಪ್ರಾಮಾಣಿಕ ಸೇವೆಗೆ ಆಸ್ಪತ್ರೆಯಲ್ಲಿ ಸರಿಯಾಗಿ ಸ್ಪಂದನೆ ಸಿಗುತ್ತಿಲ್ಲ.  ಇದರಿಂದ ಸಾಮಾನ್ಯ ಜನರಿಗೆ ತೊಂದರೆಯಾಗುತ್ತಿದೆ.

ತಾಲೂಕು ಆಸ್ಪತ್ರೆಗೆ ಸ್ತ್ರೀರೋಗ ತಜ್ಞರು‌ ಯಾಕಿಲ್ಲ? :
ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞರ ಕೊರತೆ ಹಲವು ದಿನಗಳಿಂದ ಇದೆ. ಹೆರಿಗೆ ಮಾಡಲು ವೈದ್ಯರಿಲ್ಲದೇ ಗರ್ಭಿಣಿ ಮಹಿಳೆಯರು   ದೂರದ ಕುಂದಾಪುರ, ಉಡುಪಿ ಇಲ್ಲವೇ ಖಾಸಗಿ ಆಸ್ಪತ್ರೆ ಮೊರೆ ಹೋಗಬೇಕಾಗಿದೆ.

ತಾಲೂಕ ಆಸ್ಪತ್ರೆಯಲ್ಲಿ ಅರವಳಿಕೆ ತಜ್ಞರಿದ್ದು, ಸ್ತ್ರೀರೋಗ ತಜ್ಞರಿಲ್ಲದಿದ್ದರೇ ಪರಿಸ್ಥಿತಿ ಏನು ಎಂಬ ಪ್ರಶ್ನೆ ಕಾಡುತ್ತಿದೆ. ಹೀಗಾಗಿ ಶಾಸಕರು, ಸಚಿವರು ತಕ್ಷಣ ಭಟ್ಕಳ ತಾಲೂಕು ಆಸ್ಪತ್ರೆಗೆ ಸ್ತ್ರೀರೋಗ ತಜ್ಞರು ನೇಮಿಸುವಂತೆ  ಜನತೆ ಮನವಿ ಮಾಡಿಕೊಳ್ಳುತ್ತಾರೆ. ಅಲ್ಲದೇ ಇಲ್ಲಿರುವ ರಾಜಕೀಯ ಶಮನಗೊಳಿಸುವ ಡೋಸ್ ಅಧಿಕಾರಿಗಳು ನೀಡಬೇಕಾಗಿದೆ.

ಇದನ್ನು ಓದಿ : ಉರುಳಿ ಬಿದ್ದ ಬೃಹತ್ ಮರ. ಮಕ್ಕಳ ಕರೆತರಲು ಹೋಗಿದ್ದ ಗರ್ಭಿಣಿ ಸಾವು.

ರಾತ್ರಿ ನಭೋಮಂಡಲದಲ್ಲಿ ನಡೆದ ಚಮತ್ಕಾರ. ಸಪ್ಟೆಂಬರ್ 21ಕ್ಕೆ ಸೂರ್ಯಗ್ರಹಣ.