ಕಾರವಾರ : ಕಾರವಾರದಿಂದ ಗೋವಾಗೆ(KARWAR to GOA) ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಳಿ ನದಿ (KALI RIVER) ಮೇಲೆ ನಿರ್ಮಿಸಿರುವ ಸೇತುವೆ ಕುಸಿತಗೊಂಡಿರುವುದಕ್ಕೆ ರಸ್ತೆ ನಿರ್ಮಾಣ ಸಂಸ್ಥೆ ಐ.ಆರ್.ಬಿ.(IRB) ಯೇ ಕಾರಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.
ಅವರು ಬುಧವಾರ ಕಾರವಾರ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಳಿನದಿಗೆ ನಿರ್ಮಿಸಿರುವ ಸೇತುವೆ ಕುಸಿತ(BRIDGE COLLAPSE) ಪ್ರದೇಶ ಭೇಟಿ ನೀಡಿ ಮಾತನಾಡಿದರು.
ಇದನ್ನು ಓದಿ. ಕಾಳಿ ಸೇತುವೆ ಇನ್ನೂ ನೆನಪು ಮಾತ್ರ.
ಕಾಳಿ ನದಿಗೆ ಹೊಸ ಸೇತುವೆ ನಿರ್ಮಿಸುವ ಸಂದರ್ಭದಲ್ಲಿ ಈ ಮೊದಲು ಇದ್ದ ಸೇತುವೆ ಮೇಲಿನಿಂದಲೇ ನಿಂತು ಹೊಸ ಸೇತುವೆಯನ್ನು ನಿರ್ಮಿಸಿರುವ ಕಾರಣ ಹಳೆಯ ಸೇತುವೆ(OLD BRIDGE) ಕುಸಿತಗೊಂಡಿದ್ದು, ಇದರಿಂದಾಗಿ ಸೇತುವೆ ಮೇಲೆ ಸಾಗುತ್ತಿದ್ದ ಲಾರಿಯು ಚಾಲಕ ಸಮೇತ ನೀರಿಗೆ ಬಿದಿದ್ದು, ತಕ್ಷಣದಲ್ಲಿ ಸ್ಥಳೀಯ ಮೀನುಗಾರರು, ಪೊಲೀಸ್ ಸಿಬ್ಬಂದಿ ರಕ್ಷಣಾ ಕಾರ್ಯ ಕೈಗೊಂಡ ಕಾರಣ ಹೆಚ್ಚಿನ ಅನಾಹುತವಾಗುವುದು ತಪ್ಪಿದೆ. ಪ್ರಸ್ತುತ ಇರುವ ಇನ್ನೊಂದು ಸೇತುವೆ ಮೇಲೆ ವಾಹನ ಸಂಚಾರ ಆರಂಭಿಸಲು ಸೇತುವೆಯ ದೃಢತೆಯ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NATIONAL HIGHWAY AUTHORITY) ಅಧಿಕಾರಿಗಳಿಂದ ಸುರಕ್ಷತಾ ಪ್ರಮಾಣ ಪತ್ರ ದೊರೆತ ನಂತರ ವಾಹನ ಸಂಚಾರಕ್ಕೆ ಅನುಮತಿ ನೀಡಲಾಗುವುದು ಎಂದರು.
ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯ (LAKSHMIPRIYA) ಮಾತನಾಡಿ, ರಾತ್ರಿ 1.30 ಸುಮಾರಿಗೆ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರದ ಕಂಟ್ರೋಲ್ ರೂಂ(CONTROL ROOM) ಗೆ ಸೇತುವೆ ಕುಸಿತ ಬಗ್ಗೆ ಮಾಹಿತಿ ಬಂದ ತಕ್ಷಣ, ಕಂದಾಯ, ಪೊಲೀಸ್ (POLICE) ಮತ್ತು ಸ್ಥಳೀಯ ಮೀನುಗಾರ ನೆರವಿನಿಂದ ರಕ್ಷಣಾ ಕಾರ್ಯ ಕೈಗೊಳ್ಳಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಲ್ಲಿನ ಲೋಕೋಪಯೋಗಿ, ಜಿಲ್ಲಾ ಪಂಚಾಯತ್(ZILLA PANCHAYAT) , ಗ್ರಾಮ ಪಂಚಾಯತ್, (GRAMA PANCHAYAT) ಮೀನುಗಾರಿಕಾ ರಸ್ತೆಗಳು ಸೇರಿದಂತೆ ಎಲ್ಲಾ ರಸ್ತೆಗಳ ಮೇಲಿರುವ ಸೇತುವೆಗಳ ದೃಡತೆಯ ಬಗ್ಗೆ ಪರಿಶೀಲಿಸಿ ಸುರಕ್ಷತಾ ಪ್ರಮಾಣ ಪತ್ರದ ವರದಿ ನೀಡುವಂತೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಅಪಾಯ ಕಂಡು ಬರುವ ಕಡೆ ಪರ್ಯಾಯ ರಸ್ತೆ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದರು.
ಲಾರಿ ಚಾಲಕನ ದೂರಿನಂತೆ ಎನ್.ಹೆಚ್.ಎ.ಐ(NHAI) ಮತ್ತು ಐ.ಆರ್.ಬಿ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ನೆಗ್ಲಜೆನ್ಸಿ ಅಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ್ ತಿಳಿಸಿದರು.
ಸಚಿವ ಮಂಕಾಳ್ ವೈದ್ಯ ವಯಕ್ತಿಕ ಸಹಾಯ : ಸೇತುವೆ ಕುಸಿತದಿಂದ ಲಾರಿಯು ಚಾಲಕ ಸಮೇತ ನೀರಿಗೆ ಬಿದ್ದು ಗಾಯಗೊಂಡು ಕ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡು (TAMILUNADU) ಮೂಲದ ಚಾಲಕ ಬಾಲ ಮುರುಗನ್‌ನ್ನು ಭೇಟಿ ಮಾಡಿ, ಆರೋಗ್ಯ ವಿಚಾರಿಸಿದ ಸಚಿವರು ವೈಯಕ್ತಿಕವಾಗಿ 50,000 ಗಳ ನೆರವು ನೀಡಿ, ಶೀಘ್ರದಲ್ಲಿ ಚೇತರಿಸಿಕೊಳ್ಳುವಂತೆ ಹಾರೈಸಿದರು. ಚಾಲಕನಿಗೆ ಜಿಲ್ಲಾಡಳಿತದ ವತಿಯಿಂದ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ನೀಡಿ, ಕಾಳಜಿ ವಹಿಸುವಂತೆ ಹಾಗೂ ಗುಣಮುಖರಾದ ನಂತರ ಸ್ವಂತ ಊರಿಗೆ ತೆರಳಲು ಅಗತ್ಯ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕುಮಾರ ಕಾಂದೂ ಹಾಗೂ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

