ಕಾರವಾರ : ಹಿರಿಯ ಧುರೀಣರಾದ ಆರ್ ವಿ ದೇಶಪಾಂಡೆ ಸಚಿವರಾಗಬೇಕೆಂದು ನಾನು ಆಶಿಸುತ್ತೆನೆ. ಸಂಪುಟಕ್ಕೆ ಸೇರುವುದಕ್ಕೆ ಅವರು ಅರ್ಹ ವ್ಯಕ್ತಿ ಎಂದು ಸಚಿವ ಮಂಕಾಳ ವೈದ್ಯ  ಹೇಳಿದ್ದಾರೆ.

ಕಾರವಾರದಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ,  ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಅವರಿಗೆ ಕೊಡಬೇಕೋ.? ನಾನೆ ಮುಂದುವರೆಯಬೇಕೊ? ಎಂಬುದನ್ನ ನಮ್ಮ ಪಕ್ಷದ ಹೈಕಮಾಂಡ್ ಹಾಗೂ ವರಿಷ್ಟರು ನಿರ್ಧರಿಸುತ್ತಾರೆ. ಆದರೆ ದೇಶಪಾಂಡೆ ಮಂತ್ರಿ ಆಗಲಿ ಎಂದು ಮುಕ್ತ ಮನಸ್ಸಿನಿಂದ ಆಶಿಸುತ್ತೇನೆ ಎಂದರು.

ಬಡವರಿಗೋಸ್ಕರ ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಲಿ ಎಂಬ ಉದ್ದೇಶಕ್ಕೆ ಯೋಜನೆ ಜಾರಿಗೆ ತಂದಿಲ್ಲ. ಯೋಜನೆ ಕೊಡಬೇಕಾದ್ರೆ ನಮಗೆ ಮತ ಹಾಕಿ ಅಂತಾ ಎಲ್ಲಿಯೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.

ನಮ್ಮ ಗ್ಯಾರಂಟಿ ಯೋಜನೆಗೂ ಚುನಾವಣೆ ಹಿನ್ನಡೆಗೂ ಸಂಬಂಧ ಇಲ್ಲ ಎಂದ ಅವರು ನಮ್ಮ ಯೋಜನೆಯಿಂದ ಕೋಟ್ಯಾಂತರ ಬಡವರಿಗೆ ಅನುಕೂಲ ಆಗಿರುವ ಸಂತಸ ಇದೆ. ಲೋಕಸಭೆ ಚುನಾವಣೆಯಲ್ಲಿ ಹಿನ್ನಡೆ ಆಗಿರುವ ಅಸಮಾಧಾನ ಇದೆ.  ಇಷ್ಟು ಸಹಾಯ ಮಾಡಿದ್ರು ಜನ ನಮಗೆ ಮತ ಹಾಕದಿರುವುದರ ಬಗ್ಗೆ ನೋವು ಇದೆ. ಆದರೆ ಏನ್ ಮಾಡೋಕೆ ಆಗುತ್ತೆ..? ಇನ್ನಷ್ಟು ಕೆಲಸ ಮಾಡಿ ಮತ ಸೆಳೆಯುವ ಕೆಲಸ ಮಾಡುತ್ತೇವೆ ಎಂದ ಅವರು ಉತ್ತರ ಕನ್ನಡ ಕ್ಷೇತ್ರದಲ್ಲಿ ಕಳೆದ ಆರು ಬಾರಿ ಕಾಂಗ್ರೆಸ್ ಗೆ ಹಿನ್ನಡೆ ಆಗಿದೆ. ಈ ಹಿಂದೆಯೂ ಎರಡು ಲಕ್ಷ, ಮೂರು ಲಕ್ಷ ಅಂತರದಲ್ಲಿ ಕಾಂಗ್ರೆಸ್ ಸೋತಿದೆ. ಆದರೆ ಹಿಂದೆ ಇದ್ದ ಯಾವ ಸಚಿವರ ತಲೆದಂಡವೂ ಆಗಿಲ್ಲ. ಹಾಗಾಗಿ ಈ ಬಾರಿ ನನ್ನ ತಲೆ ದಂಡ ಆಗುವ ಪ್ರಶ್ನೇಯೇ ಇಲ್ಲ ಎಂದು ಹೇಳಿದರು.