ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಮಂಗಳೂರು(Manglore) : ಅಕ್ರಮ ಮದ್ಯ ದಾಸ್ತಾನು ಮತ್ತು ಸಾಗಾಟ ಜಾಲದ ವಿರುದ್ಧ ಸಮರ ಸಾರಿರುವ ದಕ್ಷಿಣ ಕನ್ನಡ ಜಿಲ್ಲಾ ಅಬಕಾರಿ ಇಲಾಖೆ ಅಧಿಕಾರಿಗಳು, ಬಂಟ್ವಾಳ ತಾಲೂಕಿನಾದ್ಯಂತ ಎರಡು ಪ್ರತ್ಯೇಕ ಕಾರ್ಯಾಚರಣೆ ನಡೆಸಿ ಒಟ್ಟು 1,450.340 ಲೀಟರ್ ಗೋವಾ ಮದ್ಯ ಹಾಗೂ ಎರಡು ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಜಪ್ತಿ ಮಾಡಲಾದ ಸ್ವತ್ತುಗಳ ಒಟ್ಟು ಅಂದಾಜು ಮೌಲ್ಯ ₹20,37,340 ಆಗಿದೆ.
ಇತ್ತೀಚೆಗೆ ಹೆಜಮಾಡಿ ಟೋಲ್ ಬಳಿ ಗೋವಾ ಮದ್ಯ ವಶಪಡಿಸಿಕೊಂಡಿದ್ದ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ ಅಬಕಾರಿ ತಂಡ, ಅದೇ ಜಾಲದ ಜಾಡು ಹಿಡಿದು ಸಿನಿಮಾ ಶೈಲಿಯಲ್ಲಿ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ.
ಪ್ರಕರಣ 1: ಬಾಳ್ತಿಲದಲ್ಲಿ ಅಕ್ರಮ ದಾಸ್ತಾನು ಪತ್ತೆ
ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಪೂರ್ಲಿಪಾಡಿಯಲ್ಲಿ ಅಮಿತ್ ಪೂಜಾರಿ ಎಂಬುವವರಿಗೆ ಸೇರಿದ ಜಾಗದಲ್ಲಿ ಸಂಪ್ರಿತ್ ಕಾಸರಗೋಡು ಎಂಬಾತ ಸೇರಿಕೊಂಡು ಅಕ್ರಮವಾಗಿ ಗೋವಾ ಮದ್ಯ ದಾಸ್ತಾನು ಮಾಡಿರುವ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ 180 ಮಿಲಿ ಸಾಮರ್ಥ್ಯದ ‘ರಾಯಲ್ ಬ್ಲೂ ಮಾಲ್ಟ್ ವಿಸ್ಕಿ’ಯ 146 ಪೆಟ್ಟಿಗೆಗಳಲ್ಲಿ (ಒಟ್ಟು 1,261.440 ಲೀಟರ್) ಮದ್ಯ ಪತ್ತೆಯಾಗಿದ್ದು, ಇದರ ಮೌಲ್ಯ ₹7,72,340 ಎಂದು ಅಂದಾಜಿಸಲಾಗಿದೆ.
ಪ್ರಕರಣ 2: ಕೇರಳಕ್ಕೆ ಸಾಗಿಸುತ್ತಿದ್ದ ಮದ್ಯ ಹಾಗೂ ಕಾರುಗಳು ಜಪ್ತಿ
ಮತ್ತೊಂದು ಪ್ರಕರಣದಲ್ಲಿ, ಕಲ್ಲಡ್ಕದ ಮೆಲ್ಕಾರ್ ಸಮೀಪ ಕೇರಳ ನೋಂದಣಿಯ ಎರಡು ಕಾರುಗಳಲ್ಲಿ ಪರವಾನಗಿ ಇಲ್ಲದೆ ಗೋವಾ ಮದ್ಯವನ್ನು ಕೇರಳಕ್ಕೆ ಸಾಗಾಟ ಮಾಡುತ್ತಿದ್ದ ಜಾಲವನ್ನು ಅಧಿಕಾರಿಗಳು ಭೇದಿಸಿದ್ದಾರೆ.
-
ವಶಪಡಿಸಿಕೊಂಡ ವಾಹನಗಳು: ಹುಂಡೈ i20 (KL-56-R-2927) ಹಾಗೂ ಮಾರುತಿ ಸುಜುಕಿ ಸ್ವಿಫ್ಟ್ VDI (KL-14-H-7061).
-
ಜಪ್ತಿಯಾದ ಮದ್ಯ: 24 ಪೆಟ್ಟಿಗೆಗಳಲ್ಲಿ (ಒಟ್ಟು 188.9 ಲೀಟರ್) ರಾಯಲ್ ಬ್ಲೂ ಮದ್ಯ.
-
ಬಂಧಿತ ಆರೋಪಿಗಳು: ಚಂದ್ರಶೇಖರ್ (ಅನ್ನು), ಸಫ್ವಾನ್ ಎಂ. ಮತ್ತು ಮಹಮ್ಮದ್ ಶಾಫಿನ್. ಈ ಪ್ರಕರಣದಲ್ಲಿ ಮದ್ಯ ಮತ್ತು ಎರಡೂ ಕಾರುಗಳು ಸೇರಿ ಒಟ್ಟು ₹12,65,000 ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಲಾಗಿದ್ದು, ಆರೋಪಿಗಳ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆ 1965ರ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಾರ್ಯಾಚರಣೆಯ ತಂಡ:
ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತ ಸಿ. ಜಗದೀಶ್ ಅವರ ನಿರ್ದೇಶನ ಹಾಗೂ ದ.ಕ. ಜಿಲ್ಲಾ ಅಬಕಾರಿ ಉಪ ಆಯುಕ್ತೆ ಬಿಂದುಶ್ರೀ ಪಿ. ಅವರ ಮಾರ್ಗದರ್ಶನದಲ್ಲಿ, ಉಪ ಅಧೀಕ್ಷಕರಾದ ಸಂತೋಷ್ ಮೊಡಗಿ ಮತ್ತು ಗಾಯತ್ರಿ ಸಿ.ಎಚ್. ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಬಂಟ್ವಾಳ ವಲಯದ ಅಬಕಾರಿ ನಿರೀಕ್ಷಕ ಲಕ್ಷ್ಮಣ್ ಶಿವಣಗಿ, ಉಪನಿರೀಕ್ಷಕರಾದ ಅಭಿಷೇಕ್ ಬೋರಕರ, ವಿಶಾಲ್ ನಾಯಕ್, ಸಿಬ್ಬಂದಿಗಳಾದ ಪ್ರಕಾಶ್, ದೊಡ್ಡಪ್ಪ, ಚಾಲಕ ಧೀರಜ್ ಹಾಗೂ ಬೆಳ್ತಂಗಡಿ ವಲಯದ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಅಕ್ರಮ ಮದ್ಯ ಸಾಗಾಟ ಮತ್ತು ದಾಸ್ತಾನು ಮಾಡುವವರ ವಿರುದ್ಧ ನಿರಂತರ ನಿಗಾ ವಹಿಸಲಾಗಿದ್ದು, ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಬಕಾರಿ ಇಲಾಖೆ ಎಚ್ಚರಿಕೆ ನೀಡಿದೆ.