ಹಳಿಯಾಳ :   ಕಳೆದೊಂದು ವಾರದಿಂದ ಪಟ್ಟಣ ಹಾಗೂ ತಾಲೂಕಿನ ವಿವಿಧಡೆ ಕಳ್ಳರು ಕಳ್ಳತನ ಮಾಡುತ್ತಲೆ ಇದ್ದಾರೆ. ಒಟ್ಟು ಐದು ಅಂಗಡಿ, ಎರಡು ಮನೆ ಕಳ್ಳತನವಾಗಿದ್ದು, ಹಳಿಯಾಳ ಪೋಲೀಸರಿಗೆ  ಖದೀಮರು ಚಳ್ಳೆಹಣ್ಣು ತಿನ್ನಿಸುತ್ತಿರುವ ಘಟನೆ ನಡೆದಿದೆ.

ಸರಣಿ ಕಳ್ಳತನಗಳಿಂದ ಸಾರ್ವಜನಿಕರು ಆತಂಕಗೊಂಡಿದ್ದಾರೆ. ಮಾರ್ಕೆಟ್ ರೋಡ್, ಫಿಶ್ ಮಾರ್ಕೆಟ್ ಹತ್ತಿರ, ಬಸ್ ನಿಲ್ದಾಣ ಹತ್ತಿರ, ಮುರ್ಕಾವಾಡ ಸೇರಿ ಇತರ ಕಡೆಗಳಲ್ಲಿ ಮನೆ ಹಾಗೂ ಅಂಗಡಿ ಕಳ್ಳತನವಾಗಿದೆ.

ಬಸ್ ನಿಲ್ದಾಣ ರಸ್ತೆಯಲ್ಲಿರುವ ಶಾರದಾ ಮೊಬೈಲ್ ಅಂಗಡಿ ಶಟರ್  ಮುರಿದು ಒಳಗೆ ನುಗ್ಗಿದ ಕಳ್ಳರು ಅಂಗಡಿಯಲ್ಲಿದ್ದ ಸಿಸಿ ಕ್ಯಾಮೆರಾದ ಡಿವಿಆರ್ ಕಳಚಿ ಅಂಗಡಿಯಲ್ಲಿದ್ದ ವಸ್ತುಗಳನ್ನು ದೋಚಲು ವಿಫಲ ಯತ್ನ ನಡೆಸಿದ್ದಾರೆ.  ಮುಖ್ಯ ರಸ್ತೆಯ ಮಾರ್ಕೆಟ್‌ದಲ್ಲಿರುವ ಮೇಘರಾಜ ಶೆಟ್ಟಿ ಅವರ ಮಾಲಿಕತ್ವದ ಅರಿಹಂತ ಎಲೆಕ್ಟ್ರಾನಿಕ್ಸ್ ಅಂಗಡಿಯ ಬಾಗಿಲನ್ನು ಮುರಿದು ಅಂಗಡಿಯಲ್ಲಿದ್ದ 15 ಸಾವಿರಕ್ಕೂ ಅಧಿಕ ನಗದು ದೋಚಿದ್ದಾರೆ.

ಫಿಶ್ ಸರ್ಕಲ್‌ನ ಚರ್ಚ್ ಅಂಗಡಿ ಸಂಕೀರ್ಣದಲ್ಲಿರುವ ಸಾವೇರ ಕ್ರಾಸ್ಟಾ ಅವರ ಮಾಲಿಕತ್ವದ ಮೌಂಟ್ ಮೇರಿ ಬೇಕರಿಯ ಬಾಗಿಲನ್ನು ಮುರಿದು ಒಳ ನುಗ್ಗಿ ಅಂಗಡಿಯಲ್ಲಿದ್ದ ಒಂದು ಸಾವಿರಕ್ಕೂ ಹಣ ಕದ್ದಿದ್ದಾರೆ. ಸರಣಿ ಕಳ್ಳತನದಿಂದ ಜನರು ಮತ್ತು ವ್ಯಾಪಾರಸ್ಥರು ಆತಂಕಗೊ ದಿದ್ದಾರೆ.

ಮಾರ್ಕೆಟ್‌ನಲ್ಲಿರುವ ಲಕ್ಷ್ಮೀಕಾಂತ ಪೂಜಾರಿ ಅವರಿಗೆ ಸೇರಿದ ಶ್ರೀ ಲಕ್ಷ್ಮೀ ಪೋಟೋ ಸ್ಟುಡೀಯೋದ ಬಾಗಿಲಿನ ಬೀಗವನ್ನು ಮುರಿದು ಅಂಗಡಿಯಲ್ಲಿದ್ದ ನಗದು 12 ಸಾವಿರ ಹಾಗೂ 30ಸಾವಿರ ರೂ ಮೌಲ್ಯದ ಡಿಎಸ್‌ಎಲ್‌ಆರ್ ಕ್ಯಾಮೇರಾ ಕಳ್ಳತನ ಮಾಡಲಾಗಿದೆ.   ಮತ್ತೆ ಎರಡು ದಿನದ ಬಳಿಕ ಅದೇ ಸ್ಟುಡೀಯೊಗೆ ಆಗಮಿಸಿದ ಕಳ್ಳರು ಪುನಃ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದಾರೆ.

ಮೇ 7ರಂದು ಮಧ್ಯರಾತ್ರಿ ಬೈಕ್ ಮೇಲೆ ಬಂದ ಇಬ್ಬರು  ಕಳ್ಳರು ದಾಂಡೇಲಿಗೆ ಹೋಗುವ ರಾಜ್ಯ ಹೆದ್ದಾರಿಯ ಪಕ್ಕದಲ್ಲಿರುವ ಶ್ರೀ ವೈನ್ಸ್ ಅಂಗಡಿಯ ಶಟರ್ಸ್ ಮುರಿದು  ನಾಲ್ಕು ಸಾವಿರ ಕದ್ದೋಯ್ದ ದೃಶ್ಯ ಸಿಸಿಟಿವಿ ಯಲ್ಲಿ ಸೆರೆಯಾಗಿದೆ.

ಪಟ್ಟಣದಿಂದ ಕೇವಲ 10ಕಿಮೀ ಅಂತರದಲ್ಲಿರುವ ಮುರ್ಕವಾಡ ಗ್ರಾಮದಲ್ಲಿ ಮೇ 11ರಂದು ಮಧ್ಯರಾತ್ರಿ ಶಂಭಾಜೀ ಗುತ್ತೇನ್ನವರ ಮಾಲಿಕತ್ವದ ಮನೆಗೆ ನುಗ್ಗಿ ಒಂದು ಚಿನ್ನದ ಮಂಗಲಸೂತ್ರ, ಮೂರು ಉಂಗುರಗಳು, ಇನ್ನಿತರ ಚಿನ್ನದ ಆಭರಣಗಳು ಸೇರಿದಂತೆ ಬೆಳ್ಳಿಯ ಕೆಲವು ವಸ್ತುಗಳನ್ನು ಕಳ್ಳತನ ಮಾಡಲಾಗಿದೆ. ಹನುಮಂತ ಶಿಂಧೆ ಅವರ ಮನೆಗೆ ನುಗ್ಗಿ ಕಳ್ಳತನಕ್ಕೆ ವಿಫಲ ಯತ್ನ ನಡೆದಿದೆ. ಹೀಗೆ ಪಟ್ಟಣದಲ್ಲಿ ಕಳ್ಳತನದ ಸರಣಿ ಮುಂದುವರೆದು ಅಂಗಡಿಗಳನ್ನು ದರೋಡೆ ಮಾಡಲಾಗಿದೆ.

ಆದರೆ ಪೊಲೀಸ್ ಇಲಾಖೆ ಪ್ರಕರಣ  ದಾಖಲಿಸಿಕೊಂಡಿದೆ. ಕಳ್ಳರನ್ನು ಪತ್ತೆ ಮಾಡಲು ವಿಫಲವಾಗಿದೆ ಎಂದು ಅಂಗಡಿಗಳ ಮಾಲೀಕರು ದೂರಿದ್ದಾರೆ.