ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ದಾಂಡೇಲಿ(Dandeli) :  ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಬೋಲೆರೋ ವಾಹನ  ಡಿಕ್ಕಿ ಹೊಡೆದ ಪರಿಣಾಮವಾಗಿ ಮಹಿಳೆಯೋರ್ವಳು ಸಾವನ್ನಪ್ಪಿದ ಘಟನೆ ದಾಂಡೇಲಿ – ಹಳಿಯಾಳ(Dandeli-Haliyala) ರಾಜ್ಯ ಹೆದ್ದಾರಿಯ(State Highway) ತಾಟಗೇರಾ ಕ್ರಾಸ್ ಬಳಿ ನಡೆದಿದೆ.

ದಾಂಡೇಲಿಯಿಂದ ಆಲೂರು ಕಡೆಗೆ (Dandeli  to Aluru) ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಬೊಲೇರೋ ವಾಹನಕ್ಕೆ ಢಿಕ್ಕಿಯಾದ ಪರಿಣಾಮವಾಗಿ ಕೂತಿದ್ದ ಮಹಿಳೆ ಗಾಯಗೊಂಡಿದ್ದಳು. ಬಳಿಕ ಆಸ್ಪತ್ರೆಗೆ ಸೇರಿಸುವ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾಳೆ.

ಬಡಕಾನಶಿರಡಾ ಗ್ರಾಮದ ನಿವಾಸಿ ಪಾರ್ವತಿ ಶಂಕರ ಕಾಂಬ್ರೇಕರ (50)  ಮೃತ ದುರ್ದೈವಿ.  ಪತಿ ಶಂಕರ ಸಿದ್ದಪ್ಪ ಕಾಂಬ್ರೇಕರ ಜೊತೆ ಮೊಮ್ಮಗನನ್ನು ನೋಡುವ ಸಲುವಾಗಿ ಮಗಳ ಮನೆಯಾದ ಆಲೂರಿಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವ ಸಂದರ್ಭದಲ್ಲಿ ಘಟನೆ ನಡೆದಿದೆ.

ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನದಲ್ಲಿ ಹಿಂಬದಿ ಕೂತಿದ್ದ ಪಾರ್ವತಿ ಶಂಕರ ಕಾಂಬ್ರೇಕರ ಅವರು ಕೆಳಗೆ ಬಿದ್ದು ತಲೆಗೆ ಗಂಭೀರ ಗಾಯಗೊಂಡಿದ್ದರು.  ಪತಿ ಶಂಕರ ಕಾಂಬ್ರೇಕರ ಅವರಿಗೆ ಸಣ್ಣ ಪುಟ್ಟ ಗಾಯವಾಗಿದೆ. ನಂತರ ಶಂಕರ ಕಾಂಬ್ರೇಕರ್ ಗಾಯಗೊಂಡ ಪತ್ನಿಯನ್ನು ಸಾರಿಗೆ ಬಸ್ ಒಂದರಲ್ಲಿ ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ದಾಂಡೇಲಿಗೆ ಕರೆ ತಂದಿದ್ದಾರೆ. ಆನಂತರ ದಾಂಡೇಲಿ ಬಸ್ ನಿಲ್ದಾಣದಿಂದ ಪೊಲೀಸರು ಆಟೋರಿಕ್ಷಾದ ಮೂಲಕ ನಗರದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಪಾರ್ವತಿ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.

ಡಿಕ್ಕಿ ಮಾಡಿದ ಬೊಲೆರೋ ವಾಹನ ಸ್ಥಳದಿಂದ ಪರಾರಿಯಾಗಿದ್ದು, ಘಟನೆ ನಡೆದು ಒಂದೇ ಗಂಟೆಯೊಳಗಡೆ ದಾಂಡೇಲಿ ಗ್ರಾಮೀಣ ಠಾಣೆಯ(Dandeli Rural Station) ಪೊಲೀಸರು ಬೊಲೆರೋ ವಾಹನವನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಡಿವೈಎಸ್ಪಿ ಶಿವಾನಂದ ಮದರಕಂಡಿ, ಸಿಪಿಐ ಶಿವಾನಂದ ಅಂಬಿಗೇರ ಹಾಗೂ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.