ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ಮಾದಕ ವಸ್ತುಗಳ ಮಾರಾಟ ಮತ್ತು ಜಾಲದ ವಿರುದ್ಧ ಭಟ್ಕಳ ಶಹರ ಪೊಲೀಸರು(Bhatkal Town Police) ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರಿಂದ ಅಂದಾಜು 10,000 ರೂಪಾಯಿ ಮೌಲ್ಯದ 146 ಗ್ರಾಂ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ ಮೂರು ಮೋಟಾರ್ ಸೈಕಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಹುರುಳಿಸಾಲ ಭಾಗದ ಮೊಹಮ್ಮದ ಸಿಮ್ರಾನ ಉಸ್ಮಾನ ಸನದಿ (29), ಶಿರಕುಳಿ ಹೊಂಡ, ಜಾಲಿ ರೋಡ್ ನ ಮೊಹಮ್ಮದ ಅಖೀಲ್ ಮೊಹಮ್ಮದ ಜಾಫರ್ ಶೇಖ್ (25) ಮತ್ತು ಚೌಥನಿ ಸೇತುವೆ ಹತ್ತಿರದ ನಿವಾಸಿ ಮೊಹಮ್ಮದ ಇಮ್ರಾನ ಅಬ್ದುಲ ಗಫಾರ್ (25) ಬಂಧಿತರು.
ಭಟ್ಕಳ ಶಹರದ ಮುಗ್ಗುಂಕಾಲೋನಿಯ(Bhatkal Magdum Colony) ಶಾಹೀನ್ ಮೈದಾನದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಕಪ್ಪು ಬಣ್ಣದ ಕಾಲೇಜು ಬ್ಯಾಗ್‌ನಲ್ಲಿ ಗಾಂಜಾವನ್ನು ಇಟ್ಟುಕೊಂಡು, ಅದನ್ನು ಸಣ್ಣ ಜೀಪ್ ಲೈನ್ ಕವರ್‌ಗಳಲ್ಲಿ ತುಂಬಿಸಿ ಮಾರಾಟ ಮಾಡಲಾಗುತ್ತಿತ್ತು. ಆರೋಪಿಗಳಾದ ಮೊಹಮ್ಮದ ಸಿಮ್ರಾನ ಮತ್ತು ಮೊಹಮ್ಮದ ಅಖೀಲ್ ಅವರು ಸುಜುಕಿ ಮೋಟಾರ್ ಸೈಕಲ್ (KA-47 U-7708) ಮೇಲೆ ಗಾಂಜಾ ಇಟ್ಟುಕೊಂಡು, ಮೂರನೇ ಆರೋಪಿಯಾದ ಮೊಹಮ್ಮದ ಇಮ್ರಾನನಿಗೆ ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ.
ಘಟನೆಯಲ್ಲಿ ಒಟ್ಟು 146 ಗ್ರಾಂ ತೂಕದ ಮಾದಕ ದ್ರವ್ಯ (ಮೌಲ್ಯ ₹10,000/-)ಸುಜುಕಿ ಮೋಟಾರ್ ಸೈಕಲ್: ನಂ KA-47/U-7708 (ಮೌಲ್ಯ ₹40,000/-)ಹೀರೋ ಹೊಂಡಾ ಪ್ಯಾಷನ್ ಬೈಕ್: ನಂ KA-30/L-1590 (ಮೌಲ್ಯ ₹10,000/-)SP125 ಮೋಟಾರ್ ಸೈಕಲ್: ಕೆಂಪು ಮತ್ತು ಕಪ್ಪು ಬಣ್ಣದ ನಂಬರ್ ಪ್ಲೇಟ್ ಇಲ್ಲದ ಬೈಕ್ (ಮೌಲ್ಯ ₹20,000/-)ಜಪ್ತಿ ಮಾಡಲಾಗಿದೆ.
ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ(Bhatkal Town Police Station) ಆರೋಪಿಗಳ ವಿರುದ್ಧ NDPS ಕಾಯ್ದೆ 1985 ರ ಸೆಕ್ಷನ್ 8(c) ಮತ್ತು 20(b)(ii)A ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ (SP) ದೀಪನ ಎಂ ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-01 ಎಂ.ಕೃಷ್ಣಮೂರ್ತಿ ಮತ್ತು ಭಟ್ಕಳ ಉಪ-ವಿಭಾಗದ ಡಿವೈಎಸ್ಪಿ ಗಿರೀಶ ಬಿ. ಅವರ ಮಾರ್ಗದರ್ಶನದಲ್ಲಿ ಈ ಯಶಸ್ವಿ ದಾಳಿ ನಡೆದಿದೆ. ಭಟ್ಕಳ ಶಹರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ (ಇನ್ಸ್‌ಪೆಕ್ಟರ್) ದಿವಾಕರ ಪಿ.ಎಂ ಅವರ ನೇತೃತ್ವದಲ್ಲಿ, ಪಿಎಸ್ಐ (ಕಾನೂನು ಮತ್ತು ಸುವ್ಯವಸ್ಥೆ) ನವೀನ್ ಎಸ್ ನಾಯ್ಕ ಹಾಗೂ ಠಾಣೆಯ ಸಿಬ್ಬಂದಿಯವರು ಈ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ಪಾತ್ರ ವಹಿಸಿದ್ದರು.
