ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar): ಮತದಾರರ ಪಟ್ಟಿಯ(Voters List) ಸಮಗ್ರ ಪರಿಷ್ಕರಣೆ-2026 ಕ್ಕೆ ಸಂಬಂಧಿಸಿದಂತೆ
ಜಿಲ್ಲೆಯಲ್ಲಿ ನೋ ಮ್ಯಾಪಿಂಗ್(No Maping) ಆಗಿರುವ ಮತ್ತು ತಾರ್ಕಿಕ ವ್ಯತ್ಯಾಸ ಕಂಡುಬಂದಿರುವ 65,330 ಮತದಾರರಿಗೆ ನೋಟಿಸ್ ಜಾರಿಗೊಳಿಸುವ ಪ್ರಕ್ರಿಯೆ ಆರಂಭಗೊಂಡಿದೆ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ(DC K Laxmipriya) ತಿಳಿಸಿದರು.
ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ(DC Office) ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ಮೊದಲ ಹಂತದ ಪ್ರಕ್ರಿಯೆಯಲ್ಲಿ ಒಟ್ಟು 12,30,037
ಮತದಾರರ ಪೈಕಿ ಶೇ.91.3 ರಷ್ಟು ಎನ್ಯೂಮರೇಷನ್ ಫಾರ್ಮ್ಗಳನ್ನು ಸಂಗ್ರಹಿಸಿ ಡಿಜಿಟಲೀಕರಣಗೊಳಿಸಲಾಗಿದ್ದು, ಗೈರು ಹಾಜರಿ, ಸ್ಥಳಾಂತರ ಅಥವಾ ಮರಣ ಹೊಂದಿದ 1,07,015 ಮತದಾರರನ್ನು ಹೊರತುಪಡಿಸಿ, ಉಳಿದವರ ಹೆಸರುಗಳನ್ನೊಳಗೊಂಡ ಕರಡು ಮತದಾರರ ಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದೆ ಎಂದರು. ನೋ ಮ್ಯಾಪಿಂಗ್ ಆಗಿರುವ ಮತ್ತು ತಾರ್ಕಿಕ ವ್ಯತ್ಯಾಸ ಕಂಡುಬಂದಿರುವ 65,330 ಮತದಾರರಿಗೆ ನೋಟಿಸ್ ಸೃಜನೆ ಮಾಡುವ ಕಾರ್ಯವನ್ನು ಆರಂಭಿಸಲಾಗಿದ್ದು, ಮತದಾರರಿಗೆ ಬಿ.ಎಲ್.ಓ ಗಳು ಮನೆಬಾಗಿಲಿಗೆ ತೆರಳಿ ಈ ನೋಟೀಸ್ ಗಳನ್ನು ವಿತರಿಸಲಿದ್ದಾರೆ ಎಂದರು.
ನೋಟೀಸ್ ಪಡೆದ ಮತದಾರರು ಸೂಚಿಸಿದ ದಿನಾಂಕ, ಸಮಯ ಮತ್ತು ಸ್ಥಳದಲ್ಲಿ ಸೂಕ್ತ 12 ದಾಖಲೆಗಳೊಂದಿಗೆ ಖುದ್ದಾಗಿ
ಹಾಜರಾಗುವುದು ಕಡ್ಡಾಯವಾಗಿದ್ದು, ಒಂದು ವೇಳೆ ಮೊದಲ ನೋಟಿಸ್ ನಲ್ಲಿ ನೀಡುವ ದಿನದಲ್ಲಿ ಬರಲು ಸಾಧ್ಯವಾಗದಿದ್ದರೆ, ಮತ್ತೊಂದು ಅವಕಾಶ ನೀಡಲಾಗುತ್ತದೆ. ಮತದಾರರು ಹೊಸ ನೋಂದಣಿ, ಹಾಗೂ ತಿದ್ದುಪಡಿ/ಸ್ಥಳಾಂತರಕ್ಕೂ ಅವಕಾಶ ನೀಡಲಾಗಿದ್ದು, ಈ ಎಲ್ಲಾ ಪ್ರಕಿಯೆಗಳಿಗೆ ಮತದಾರರು ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 23 ರವರೆಗೆ ಅವಕಾಶವಿದೆ ಎಂದರು.
ನೋ ಮ್ಯಾಪಿಂಗ್ ಆಗಿರುವ ಮತ್ತು ತಾರ್ಕಿಕ ವ್ಯತ್ಯಾಸ ಕಂಡುಬಂದಿರುವ ಮತದಾರರು ನೋಟೀಸ್ ವಿಚಾರಣೆ ವೇಳೆ ನೀಡುವ ದಾಖಲೆಗಳನ್ನು ಪರಿಶೀಲಿಸುವ ಕಾರ್ಯಕ್ಕಾಗಿ 145 ಹೆಚ್ಚುವರಿ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಅತ್ಯಂತ ಎಚ್ಚರಿಕೆಯಿಂದ ಈ ಪ್ರಕ್ರಿಯೆಯನ್ನು ಕೈಗೊಳ್ಳಲಾಗುತ್ತಿದ್ದು ಜಿಲ್ಲೆಯ ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಎಚ್ಚರವಹಿಸಲಾಗುವುದು. ಅಕ್ಟೋಬರ್ 27 ರಂದು ಅಂತಿಮ ಮತದಾರರ ಪಟ್ಟಿ(Final Voters List) ಪ್ರಕಟಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ದಿಲೀಷ್ ಶಶಿ , ಅಪರ ಜಿಲ್ಲಾಧಿಕಾರಿ
ಸಾಜಿದ್ ಮುಲ್ಲಾ ಇದ್ದರು.
