ಬೆಂಗಳೂರು : ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಸಿಕ್ಕಾಪಟ್ಟೆ ಮಳೆ  ಹೊಡಿತಿದೆ. ಹೀಗಾಗಿ ಮಳೆ ಹೆಚ್ಚಾಗಿರುವ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ಜುಲೈ 16 ರಂದು ರಜೆ ನೀಡಲಾಗಿದೆ.

ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಜೊತೆಗೆ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗಿದೆ. ಹೀಗಾಗಿ ನಾಳೆ ಶಾಲೆ ಮತ್ತು ಕಾಲೇಜುಗಳಿಗೆ ರಜೆ  ನೀಡಲಾಗಿದೆ.
 
ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ಜುಲೈ 16ರಂದು ರೆಡ್ ಅಲರ್ಟ್ ಘೋಷಣೆಯಾಗಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ದಕ್ಷಿಣ ಕನ್ನಡ ಉತ್ತರಕನ್ನಡ ಜಿಲ್ಲೆಯ ಅಂಗನವಾಡಿ , ಸರಕಾರಿ ಅನುದಾನಿತ ಮತ್ತು ಖಾಸಗಿ , ಪ್ರಾಥಮಿಕ ಪ್ರೌಢಶಾಲೆ , ಪದವಿ ಪೂರ್ವ ಕಾಲೇಜುಗಳಿಗೆ ರಜೆಯನ್ನು ಘೋಷಿಸಿ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಆದ್ದೇಶಿಸಿದ್ದಾರೆ.

ಭಾರೀ ಮಳೆ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಮೂರು ತಾಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಸಾಗರ, ತೀರ್ಥಹಳ್ಳಿ, ಹೊಸನಗರ ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ.

ತಗ್ಗು ಪ್ರದೇಶಗಳು, ಸರೋವರಗಳು, ಸಮುದ್ರ ತೀರ ಮತ್ತು ನದಿ ಬದಿಗಳಿಗೆ ಮಕ್ಕಳು ಹೋಗದಂತೆ ಪಾಲಕರು ಖಚಿತಪಡಿಸಿಕೊಳ್ಳಬೇಕು. ಮೀನುಗಾರರಿಗೂ ನೀರಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಕಚೇರಿಯಲ್ಲಿಯೇ ಇರುವಂತೆ ಸೂಚಿಸಲಾಗಿದೆ. ಜಿಲ್ಲಾಡಳಿತದಿಂದ ವಿವಿಧ ಹುದ್ದೆಗಳಿಗೆ ನೇಮಕಗೊಂಡಿರುವ ನೋಡಲ್ ಅಧಿಕಾರಿಗಳು ಜಾಗೃತರಾಗಿ ಸಾರ್ವಜನಿಕರ ದೂರುಗಳಿಗೆ ಸ್ಪಂದಿಸುವಂತೆ ಕೋರಲಾಗಿದೆ. ತಹಶೀಲ್ದಾರ್‌ಗೆ ನಿರಂತರ ಸಂಪರ್ಕದಲ್ಲಿರುವಂತೆ ಸೂಚಿಸಲಾಗಿದೆ.

ತಾಲೂಕು ಮಟ್ಟದಲ್ಲಿ ರಕ್ಷಣಾ ಕೇಂದ್ರಗಳನ್ನು ತೆರೆದು ಅವುಗಳನ್ನು ಸಜ್ಜುಗೊಳಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ತುರ್ತು ಸೇವೆಯು ಟೋಲ್ ಫ್ರೀ ಕಂಟ್ರೋಲ್ ರೂಮ್ ಗೆ ಮಾಹಿತಿ ತಿಳಿಸುವಂತೆ ಕೋರಲಾಗಿದೆ.

ಕಡಲತೀರಗಳು, ನದಿಗಳು ಮತ್ತು ಜಲಪಾತಗಳಿಗೆ ಹೋಗದಂತೆ  ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಪ್ರದೇಶಗಳಲ್ಲಿ ಫೋಟೋಗಳು ಮತ್ತು ವೀಡಿಯೊಗಳನ್ನು ತೆಗೆದುಕೊಳ್ಳದಂತೆ ಸೂಚಿಸಲಾಗಿದೆ.