ಮಂಗಳೂರು : ರಾಜ್ಯದಲ್ಲಿ ಕರಾವಳಿಯಲ್ಲಿ ಬಾರೀ ಮಳೆಯಿಂದಾಗಿ ಜನ ತತ್ತರಿಸಿದ್ದಾರೆ. ಮಳೆಯ ಅವಂತರದಿಂದಗಿ ಮಂಗಳೂರಿನಲ್ಲಿ ಇಬ್ಬರು ಸಾವನಪ್ಪಿದ ಘಟನೆ ನಡೆದಿದೆ.
ಕೊಡಗು ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು ಕಾವೇರಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಜಾಸ್ತಿಯಾಗಿದ್ದರಿಂದ ಭಾಗಮಂಡಲ-ನಾಪೋಕ್ಲು ರಸ್ತೆಗೆ ನೀರು ನುಗ್ಗಿದೆ. ತ್ರಿವೇಣಿ ಸಂಗಮದ ನೂತನ ಪಾರ್ಕ್ ನೀರಿನಲ್ಲಿ ಮುಳುಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಜಾಸ್ತಿಯಾಗಿದೆ. ಪುತ್ತೂರಿನಲ್ಲಿ ಮನೆ ಮೇಲೆ ದರೆ ಕುಸಿದು ಇಬ್ಬರು ಮಕ್ಕಳು ಮಣ್ಣಿನಡಿ ಸಿಲುಕಿ ಅಪಾಯದಿಂದ ಪಾರಾಗಿದ್ದಾರೆ.
ಬಂಟ್ವಾಳ ತಾಲೂಕಿನ ಕಸಬಾ ಗ್ರಾಮದ ಹೊಸ್ಮಾರ್ ನಲ್ಲಿ ಕಾಂಪೌಂಡ್ ಕುಸಿದು ಬಿದ್ದು ಎರಡು ಮನೆಗಳು ಅಪಾಯದ ಸ್ಥಿತಿಯಲ್ಲಿದೆ. ಸದ್ಯ ಎರಡು ಕುಟುಂಬದವರನ್ನ ಸಂಬಂಧಿಕರ ಮನೆಗೆ ಸ್ಥಳಾಂತರ ಮಾಡಲಾಗಿದೆ.
ಮಂಗಳೂರಿನ ರೊಸಾರಿಯೋ ಶಾಲೆ ಬಳಿ ವಿದ್ಯುತ್ ಶಾಕ್ ತಗುಲಿ ಇಬ್ಬರು ಆಟೋ ಚಾಲಕರು ಸಾವನ್ನಪ್ಪಿದ್ದಾರೆ. ರಾಜು ಮತ್ತು ದೇವರಾಜು ಮೃತ ಚಾಲಕರೆಂದು ಹೇಳಲಾಗಿದೆ. ಬೆಳಗ್ಗೆ ಆಟೋ ಸ್ವಚ್ಛ ಮಾಡುತ್ತಿದ್ದಾಗ ವಿದ್ಯುತ್ ತಂತಿ ಸ್ಪರ್ಶಿಸಿದ್ದರಿಂದ ದುರ್ಘಟನೆ ಸಂಭವಿಸಿದೆ.ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಉಡುಪಿ ಜಿಲ್ಲೆಯಲ್ಲೂ ಮಳೆ ಮುಂದುವರಿದಿದೆ. ರಾತ್ರಿ ಕೆಲವೆಡೆ ಗುಡುಗು ಸಹಿತ ಗಾಳಿಮಳೆಯಾಗಿದ್ದು ಇಂದ್ರಾಣಿ ತೀರ್ಥ ತುಂಬಿ ಹರಿಯುತ್ತಿದೆ. ಕಲ್ಸಂಕ, ಮಥರಾ ಛತ್ರದೊಳಗೆ ನೀರು ನುಗ್ಗಿದೆ. ಬ್ರಹ್ಮಾವರ ತಾಲೂಕಿನ ಚಾಂತಾರನಲ್ಲಿ ಕೃತಕ ನೆರೆ ಸೃಷ್ಟಿಯಾಗಿದೆ. ಗ್ರಾಮೀಣ ಭಾಗದಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ.
ಉತ್ತರಕನ್ನಡ ಜಿಲ್ಲೆಯ ಭಟ್ಕಳ, ಹೊನ್ನಾವರ ದಲ್ಲಿ ಮಳೆ ಆರ್ಭಟಿಸಿದ್ದು ತಗ್ಗು ಪ್ರದೇಶ ಜಲಾವ್ರತವಾಗಿತ್ತು. ಕಡಲತೀರದಲ್ಲಿ ಅಲೆಯ ಅಬ್ಬರ ಹೆಚ್ಚಾಗಿ ಕಂಡುಬರುತ್ತಿದೆ. ಗಾಳಿ ಜೋರಾಗಿ ಬೀಸುತ್ತಿದೆ. ಹವಮಾನ ಇಲಾಖೆ ಎಚ್ಚರಿಕೆ ನೀಡಿದೆ.