ಅಂಕೋಲಾ : ಶಿರೂರು ಗುಡ್ಡ ಕುಸಿತ ಕಾರ್ಯಾಚರಣೆಗೆ ಸಾಹಸಿಗ ಈಶ್ವರ್ ಮಲ್ಪೆ ಕೆಲ ಹೊತ್ತಿನಲ್ಲಿ ಆಗಮಿಸಲಿದ್ದಾರೆ.

ಈಗಾಗಲೇ ಉತ್ತರಕನ್ನಡ ಜಿಲ್ಲಾಡಳಿತ, ಕಾರವಾರ ಶಾಸಕ ಸತೀಶ್ ಸೈಲ್, ಜಿಲ್ಲಾ ಪೊಲೀಸ್ ಇಲಾಖೆ ಕಠಿಣವಾದ ಪ್ರಯತ್ನ ಮಾಡುತ್ತಿದೆ. ನಿವೃತ್ತ ಮೇಜರ್ ಜನರಲ್ ಇಂದ್ರಬಾಲನ್ ಉಸ್ತುವಾರಿಯಲ್ಲಿ ನದಿಯಲ್ಲಿ ಪರಿಶೀಲನೆ ನಡೆದಿದೆ.

ಅತ್ಯಾಧುನಿಕ ದ್ರೋಣ್ ಸಹಾಯದಿಂದ ನದಿಯ ಇಂಚಿಂಚು ಭಾಗವನ್ನ ಶೋಧಿಸಲಾಗಿದೆ. ಸುಮಾರು 20 ಅಡಿ ಆಳದಲ್ಲಿ ಅರ್ಜುನ್ ಇರುವ ಟ್ರಕ್ ಇದೆ ಎಂಬ ಮಾಹಿತಿ ಲಭಿಸಿದೆ. ಆದರೆ ಇಷ್ಟು ಆಳಕ್ಕೆ ಇಳಿದು ತರುವುದು ಸಾಹಸದ ಕೆಲಸ. ಹೀಗಾಗಿ ಈ ಹಿಂದೆ ಹಲವು ಸಾಹಸದ ಕಾರ್ಯಾಚರಣೆ ಮಾಡಿ ಯಶಸ್ವಿಯಾಗಿದ್ದ ಈಶ್ವರ್ ಮಲ್ಪೆ ಅವರ ತಂಡದ ನೆರವು ಕೋರಲಾಗಿದೆ. ಕೆಲ ಹೊತ್ತಿನಲ್ಲಿ ಅವರ ಏಳು ಜನರ ತಂಡ ಶಿರೂರಿಗೆ ಆಗಮಿಸಲಿದೆ.

ದುರಂತಕ್ಕೆ ಸಂಬಂಧಿಸಿ ಇನ್ನೂ ಮೂವರು ಪಟ್ಟೆಯಾಗಬೇಕಿದ್ದು, ಅರ್ಜುನ್ ಇರುವ ಟ್ರಕ್, ಲಾರಿ ಸೇರಿ ಇತರ ವಸ್ತುಗಳು ಪತ್ತೆ ಮಾಡಬೇಕಾಗಿದೆ.