ಕಾರವಾರ (Karwar) : ಅಂಕೋಲಾ(Ankola) ತಾಲೂಕಿನ ಶಿರೂರು ದುರಂತದಲ್ಲಿ (Shiruru Tragedy) ಬಳಿಕ ನಡೆದ ಶೋಧ ಕಾರ್ಯಾಚರಣೆಯಲ್ಲಿ ಸಿಕ್ಕ ಎಲುಬುಗಳು ಮಾನವನದ್ದು, ಆದರೆ ಯಾರದೆಂಬುದು ಗುರುತಿಸಲು ಸಾಧ್ಯವಾಗಿಲ್ಲ.

ವಿಧಿ ವಿಜ್ಞಾನ ಪರೀಕ್ಷೆಯಲ್ಲಿ  ಎಲುಬುಗಳನ್ನ  ಖಚಿತಪಡಿಸಲು ಸಾಧ್ಯವಾಗಿಲ್ಲ.  ಜುಲೈ 16 ರಂದು ಶಿರೂರಿನಲ್ಲಿ ಗುಡ್ಡ ಕುಸಿತ ಸಂಭವಿಸಿತ್ತು. ಮೂರು ತಿಂಗಳ ಬಳಿಕ ಅಂದರೆ ಅಕ್ಟೋಬರ್ ನಲ್ಲಿ ಗಂಗಾವಳಿ ನದಿಯಲ್ಲಿ(Gangavali River) ಡ್ರೆಜಿಂಗ್ ಬಾರ್ಜ್ ಸಹಾಯದಿಂದ ಮೂರನೇ ಹಂತದ ಕಾರ್ಯಾಚರಣೆ ನಡೆಸಲಾಗಿತ್ತು. ಅಕ್ಟೋಬರ್ 7 ರಂದು ಎರಡು ಎಲುಬುಗಳು ಗಂಗಾವಳಿ ನದಿಯಲ್ಲಿ ಸಿಕ್ಕಿತ್ತು. ಅವುಗಳನ್ನು ಹುಬ್ಬಳ್ಳಿಯ ಪ್ರಾದೇಶಿಕ ವಿಧಿ  ವಿಜ್ಞಾನ ಪ್ರಯೋಗಾಲಯಕ್ಕೆ ಡಿಎನ್‌ಎ(DNA) ಪರೀಕ್ಷೆಗಾಗಿ ಕಳಿಸಲಾಗಿತ್ತು. ಸತತ ಎರಡು ತಿಂಗಳ ಬಳಿಕ  ಪ್ರಯೋಗಾಲಯದ ವರದಿ ಬಂದಿದ್ದು, ಅದರಲ್ಲಿ ಈ ಎಲುಬುಗಳಿಂದ ಡಿಎನ್‌ಎ ಗುರುತಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಲಾಗಿದೆ. ಎರಡೂ ಪುರುಷರ ಎಲುಬುಗಳಾಗಿದ್ದು,ಪಕ್ಕೆಲುಬಾಗಿದೆ. ಇನ್ನೊಂದು ಮುಂಗೈ ಎಲುಬು ಎಂಬುದು ಖಚಿತ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಶಿರೂರು ಗುಡ್ಡ ಕುಸಿತ ಘಟನೆಯಲ್ಲಿ ಒಬ್ಬ ಪುರುಷನ ಕಾಲು ಹಾಗೂ ಅದರ ಕೆಳಗಿನ ಭಾಗ ಮಾತ್ರ ಲಭ್ಯವಾಗಿತ್ತು. ಇನ್ನೊಂದು ದೇಹದ ಕೈ ಮಾತ್ರ ಲಭ್ಯವಾಗಿತ್ತು. ಅವುಗಳ ಡಿಎನ್‌ಎ ಪರೀಕ್ಷೆಗೆ ಕಳಿಸಲಾಗಿತ್ತು. ಎರಡೂ ವರದಿಗಳು ಮೂರು ದಿನದಲ್ಲಿ ಲಭ್ಯವಾಗಿದ್ದು, ಅದರ ಆಧಾರದ ಮೇಲೆ ಮರಣ ಪ್ರಮಾಣಪತ್ರ ಹಾಗೂ ಮೃತರ ಕುಟುಂಬಸ್ಥರಿಗೆ ಪರಿಹಾರ ವಿತರಿಸಲಾಗಿದೆ. ಆದರೆ, ನಂತರ ಸಿಕ್ಕ ಎರಡು ಎಲುಬುಗಳ ಡಿಎನ್‌ಎ ವರದಿ ಎರಡು ತಿಂಗಳಾದರೂ ಸಿಕ್ಕಿರಲಿಲ್ಲ. ವೈದ್ಯರು ಮೂಳೆಯನ್ನು ಫಾರ್ಮಾಲಿನ್‌ನಲ್ಲಿ ನೆನೆಸಿ ಕಳಿಸಿದ್ದು, ಡಿಎನ್‌ಎ ಗುರುತಿಸಲು ಅಡ್ಡಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದರು.

ಈಗಾಗಲೇ ಕೇರಳದ ಚಾಲಕ ಅರ್ಜುನ್ (Arjun)ಮೃತದೇಹ ಪತ್ತೆಯಾಗಿದ್ದು, ಶಿರೂರಿನ ಜಗನ್ನಾಥ ನಾಯ್ಕ ಹಾಗೂ ಗಂಗೆಕೊಳ್ಳದ ಲೋಕೇಶ ನಾಯ್ಕ ಅವರ ಸುಳಿವೇ ಸಿಕ್ಕಿರಲಿಲ್ಲ. ರಾಜ್ಯ ಸರ್ಕಾರ ಎಲ್ಲ ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಘೋಷಿಸಿದೆ. ಎಲ್ಲ ಮೃತರ ಕುಟುಂಬಗಳಿಗೆ ತಕ್ಷಣ ಪರಿಹಾರ ವಿತರಿಸಲಾಗಿತ್ತು. ಮೃತ ದೇಹ ಪತ್ತೆಯಾಗದ ಇಬ್ಬರ ಕುಟುಂಬಗಳಿಗೂ ಕೆಲ ದಿನಗಳ ಹಿಂದಷ್ಟೇ ವಿಶೇಷ ಅನುಮತಿಯೊಂದಿಗೆ ತಲಾ 5 ಲಕ್ಷ ಪರಿಹಾರ ವಿತರಿಸಲಾಗಿದೆ. ಆದರೆ, ಅವರಿಗೆ ಮರಣ ಪ್ರಮಾಣಪತ್ರ ಸಿಕ್ಕಿಲ್ಲ. ಮರಣ ಪ್ರಮಾಣಪತ್ರ ಕೊಡಲು ಕಾನೂನಿನ ತೊಡಕಿತ್ತು. ಈಗ ಬಂದಿರುವ ಡಿಎನ್‌ಎ ವರದಿ ಆಧರಿಸಿ ಮರಣ ಪ್ರಮಾಣಪತ್ರ ಕೊಡುವ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ  ಕೆ. ಲಕ್ಷ್ಮೀಪ್ರಿಯಾ(Lakshmipriya) ತಿಳಿಸಿದ್ದಾರೆ.