ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಶಿರಸಿ(Sirsi) : ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ಏರ್‌ಗನ್ ಗುಂಡು ತಗುಲಿ 9 ವರ್ಷದ ಬಾಲಕ ಸಾವನ್ನಪ್ಪಿದ ಘಟನೆಗೆ ತಿರುವು ಸಿಕ್ಕಿದೆ. ಶಿರಸಿ ಗ್ರಾಮೀಣ ಠಾಣೆಯ(Sirsi Rural Police) ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ತೋಟ ಕಾಯುವ ನಿತೀಶ್ ಗೌಡ ಮತ್ತು ತೋಟದ ಮಾಲಿಕ ರಾಘವ ಹೆಗಡೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ, ಆಟ ಆಡುತ್ತಿದ್ದ ವೇಳೆ ಬಾಲಕನ ಸಹೋದರನ ಕೈಯಿಂದ ಟ್ರಿಗರ್ ಪ್ರೆಶ್ ಆಗಿ ಹಾರಿದ ಬಗ್ಗೆ ಸುದ್ದಿಯಾಗಿತ್ತು. ಆದರೆ, ಘಟನೆಯ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪರಿಶೀಲನೆ ನಡೆಸಿದ ಪೊಲೀಸರು ನಿತೀಶ್ ಗೌಡ ಎಂಬಾತನ ಕೈ ಬಟನ್ ಗೆ ತಾಗಿದಾಗ ಏರ್ ಗನ್ ನಿಂದ ಗುಂಡು ಹೊರಬಿದ್ದಿದೆ. ಬಳಿಕ ಬಾಲಕನಿಗೆ ತಗುಲಿ ಸಾವಿಗೆ ಕಾರಣವಾಗಿದೆ ಎಂಬುದನ್ನು ದೃಢಪಡಿಸಿದ್ದಾರೆ.
ಈ ಸಂಬಂಧ ನಿತೀಶ್ ಗೌಡನನ್ನು ಪೊಲೀಸರು ಬಂಧಿಸಿದ್ದು, ಘಟನೆಯ ಎ2 ಆರೋಪಿಯಾಗಿ ತೋಟದ ಮಾಲಿಕ ರಾಘವ ಹೆಗಡೆ ಅವರನ್ನು ಕೂಡ ವಶಕ್ಕೆ ಪಡೆದಿದ್ದಾರೆ. ರಾಘವ ಹೆಗಡೆ ಅವರ ತೋಟದಲ್ಲಿಯೇ ಮೃತ ಬಾಲಕ ಕರಿಯಪ್ಪನ ತಂದೆ ಕೆಲಸ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಈ ಹಿಂದೆ ಆರೋಪಿ ನಿತೇಶ ಗೌಡ ಫಿರ್ಯಾದಿ ಮಕ್ಕಳ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಆಡಿ ಅವಾಚ್ಯವಾಗಿ ನಿಂದಿಸುತ್ತಿದ್ದ. ಹೀಗಾಗಿ ಮೃತ ಬಾಲಕನ ತಾಯಿ ದೂರು ನೀಡಿದ್ದು ತನ್ನ ಮಗನನ್ನ ಕೊಲೆ ಮಾಡಲಾಗಿದೆ ಎಂದು ಪೊಲೀಸರಿಗೆ ತಿಳಿಸಿದ್ದಳು. ಶಿರಸಿ ಗ್ರಾಮೀಣ ಠಾಣೆ(Sirsi Rural Police) ಪೊಲೀಸರು ಮುಂದಿನ ತನಿಖೆ ಮುಂದುವರೆಸಿದ್ದಾರೆ.
	
						
							
			
			
			
			
