ಧಾರವಾಡ : ಎಐಯುಟಿಯುಸಿಗೆ ಸಂಯೋಜನೆಗೊಂಡಿರುವ ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಕಟ್ಟಡ ಕಾರ್ಮಿಕರ ರಾಜ್ಯ ಸಮ್ಮೇಳನ ಧಾರವಾಡದ ಸರ್ಕಾರಿ ನೌಕರರ ಭವನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಧ್ವಜಾರೋಹಣ ಹಾಗೂ ಕಾರ್ಮಿಕ ಹೋರಾಟದಲ್ಲಿ ಮಡಿದ ಹುತಾತ್ಮರಿಗೆ ಗೌರವ ನಮನವನ್ನು ಸಲ್ಲಿಸಲಾಯಿತು. ಸಭೆಗೆ ಮುನ್ನ ವಿವಿಧ ಜಿಲ್ಲೆಗಳಿಂದ ಬಂದ ನೂರಾರು ಕಾರ್ಮಿಕರ ಪ್ರತಿನಿಧಿಗಳು ಕಲಾ ಭವನದಿಂದ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ಸರ್ಕಾರಿ ನೌಕರರ ಭವನದತ್ತ ಹೊರಟರು.
ಎಐಯುಟಿಯುಸಿ ರಾಜ್ಯ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ರಾಜ್ಯ ಅಧ್ಯಕ್ಷರಾದ ಕಾ.ಕೆ.ಸೋಮಶೇಖರ್ ರಾಜ್ಯ ಸಮ್ಮೇಳನವನ್ನ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮದುವೆಗೆ ಸಹಾಯಧನ, ಮಕ್ಕಳಿಗೆ ಶೈಕ್ಷಣಿಕ ಸಹಾಯ ಧನ ಯೋಜನೆಗಳು ಪ್ರಾರಂಭದಲ್ಲಿ ಕಾರ್ಮಿಕರಿಗೆ ಸಹಾಯವಾಗಿದ್ದರೂ, ನಂತರದ ದಿನಗಳಲ್ಲಿ ಕಾರ್ಮಿಕರಿಗೆ ಪ್ರಯೋಜನಗಳು ತಲುಪುವುದು ಕಷ್ಟವಾಗುತ್ತಾ ಹೋಯಿತು. ಮಂಡಳಿಯು, ಏಕಪಕ್ಷೀಯ ನಿರ್ಧಾರಗಳ ಮೂಲಕ ಅನಾವಶ್ಯಕ, ಅಸಮಂಜಸ ಆರೋಗ್ಯ ತಪಾಸಣೆ , ದುಬಾರಿ ಲ್ಯಾಪಟಾಪ್ ಹಾಗೂ ಕಳಪೆ ಕಿಟ್ ವಿತರಣೆಗಳ ಮೂಲಕ ಮಂಡಳಿಯ ಹಣ ಪೋಲು ಮಾಡುತ್ತಿದೆ. ಈಗಾಗಲೇ ಹಲವಾರು ಹಗರಣಗಳು, ಭ್ರಷ್ಟಾಚಾರಗಳು ಬೆಳಕಿಗೆ ಬಂದಿವೆ. ಹೆಚ್ಚುತ್ತಿರುವ ಬೋಗಸ್ ಕಾರ್ಡ್ಗಳು, ಮಂಡಳಿಯ ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಈ ಹಿಂದೆ ಕಾರ್ಮಿಕರ ಮಕ್ಕಳಿಗೆ ನೀಡುತ್ತಿದ್ದ ಸ್ಕಾಲರ್ಷಿಪ್ ಹಣವನ್ನು 60ರಿಂದ 80 ಶೇ. ಕಡಿತ ಮಾಡಿರುವುದರಿಂದ ಉನ್ನತ ಶಿಕ್ಷಣ ಮಾಡುತ್ತಿದ್ದ ಕಟ್ಟಡ ಕಾರ್ಮಿಕರ ಮಕ್ಕಳು ತಮ್ಮ ಶಿಕ್ಷಣವನ್ನು ಕೈಬಿಡುವ ಅನಿವಾರ್ಯತೆಗೆ ಒಳಗಾಗಿದ್ದಾರೆ” ಎಂದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ ಎಐಯುಟಿಯುಸಿ ರಾಜ್ಯ ಕಾರ್ಯದರ್ಶಿ ಕಾ.ಸೋಮಶೇಖರ್ ಯಾದಗಿರಿ ಮಾತನಾಡಿ, ಕಟ್ಟಡ ಕಾರ್ಮಿಕರು ಸೇರಿದಂತೆ ಎಲ್ಲಾ ಕಾರ್ಮಿಕರ ಜೀವನ ಇಂದು ಅಭದ್ರತೆಯಿಂದ ಕೂಡಿದೆ. ಬೆಲೆ ಏರಿಕೆ, ನಿರುದ್ಯೋಗ, ದುಬಾರಿ ಆರೋಗ್ಯ ಹಾಗೂ ಶಿಕ್ಷಣ ಸೌಲಭ್ಯಗಳು ಮುಂತಾದ ಸಮಸ್ಯೆಗಳು ಕಾರ್ಮಿಕರ ಬದುಕನ್ನು ಯಾತನಮಯವಾಗಿಸಿವೆ. ಇಂತಹ ಸಂದರ್ಭದಲ್ಲಿ ಆಳುವ ಸರ್ಕಾರಗಳಿಂದ ಕಾರ್ಮಿಕರ ಸಂಕಷ್ಟಗಳನ್ನು ಕೊಂಚ ಮಟ್ಟಿಗಾದರೂ ಕಡಿಮೆ ಮಾಡುವ ಯೋಜನೆಗಳಿಲ್ಲ. ಬದಲಿಗೆ ಎಲ್ಲಾ ಸರ್ಕಾರಗಳು ಕಾರ್ಮಿಕರಿಗೆ ಇರುವ ಸೌಲಭ್ಯಗಳನ್ನು ಕಿತ್ತುಕೊಳ್ಳುವಲ್ಲಿ ನಿರತವಾಗಿವೆ. ಮತ್ತೊಂದೆಡೆ ಇದೇ ಸರ್ಕಾರಗಳು ದೊಡ್ಡ ದೊಡ್ಡ ಉದ್ಯಮಪತಿಗಳ ತ್ರಿಜೋರಿ ತುಂಬಿಸುವ ನಿಟ್ಟಿನಲ್ಲಿ ನೀತಿಗಳನ್ನು ಜಾರಿಗೆ ತರುತ್ತಿವೆ. ಹೋಗಾಗಿ ಎಲ್ಲಾ ಸರ್ಕಾರಗಳು ಕಾರ್ಮಿಕ ವಿರೋಧಿ ಹಾಗೂ ಬಂಡವಾಳಶಾಹಿ ಪರ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಕಟ್ಟಡ ಕಾರ್ಮಿಕರು ಸೇರಿದಂತೆ ಎಲ್ಲಾ ವರ್ಗದ ಕಾರ್ಮಿಕರು ಸಂಘಟಿತರಾಗಿ ಬಲಿಷ್ಠವಾದ ಹೋರಾಟ ಬೆಳೆಸುವ ತುರ್ತು ಅವಶ್ಯಕತೆ ಇದೆ. ಇದೊಂದೇ ಕಾರ್ಮಿಕರಿಗೆ ಇರುವ ಏಕೈಕ ಮಾರ್ಗ ಎಂದರು.
ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ರಾಜ್ಯ ಉಪಾಧ್ಯಕ್ಷ ಕಾ.ಷಣ್ಮುಗಂ ಪಿ.ಎಸ್ ಮಾತನಾಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ರಾಜ್ಯ ಕಾರ್ಯದರ್ಶಿ ಕಾ.ಎ.ದೇವದಾಸ್ ವಹಿಸಿದ್ದರು.
ರಾಜ್ಯ ಸಮಿತಿ ಸದಸ್ಯ ಕಾ.ಗಂಗಾಧರ ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮ್ಮೇಳನದ ಕೊನೆಯಲ್ಲಿ ನೂತನ ರಾಜ್ಯ ಸಮಿತಿಯನ್ನು ಚುನಾಯಿಸಲಾಯಿತು. ವೇದಿಕೆಯಲ್ಲಿ ವಿವಿಧ ಜಿಲ್ಲೆಗಳ ಕಾರ್ಮಿಕ ಮುಖಂಡರು ಉಪಸ್ಥಿತರಿದ್ದರು.