ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಭಟ್ಕಳ(Bhatkal): ತಾಲೂಕಿನ ಬೆಳಕೆ ಗ್ರಾಮದ (Belke Village)ಗರಡಿಹಿತ್ಲು ಶ್ರೀ ಭಂಟಗೋಂಡ ದೇವಸ್ಥಾನದಲ್ಲಿ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದಾರೆ. ಪ್ರಕರಣ ದಾಖಲಾದ 24 ಗಂಟೆಯೊಳಗೆ ಆರೋಪಿತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸೆಪ್ಟೆಂಬರ್ 28ರ ರಾತ್ರಿಯಿಂದ ಸೆಪ್ಟೆಂಬರ್ 29ರ ಬೆಳಗಿನ ಜಾವದ ನಡುವಿನ ಅವಧಿಯಲ್ಲಿ ಕಳ್ಳರು ದೇವಸ್ಥಾನ(Temple) ಹಾಗೂ ಕೊಟ್ಟಿಗೆಯ ಬಾಗಿಲ ಬೀಗ ಮುರಿದು ಒಳನುಗ್ಗಿದ್ದರು. ದೇವರ ಕುತ್ತಿಗೆಯಲ್ಲಿದ್ದ ಸುಮಾರು 60ಸಾವಿರ ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದರು. ಈ ಕುರಿತು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ವಿಶೇಷ ತನಿಖಾ ತಂಡ ರಚಿಸಿದ ಪೊಲೀಸರು, ಸೆಪ್ಟೆಂಬರ್ 30ರಂದು ಹನಿಫಾಬಾದ್ ಹೆಬಳೆಯ(Hanifabad Heble) ತಲಹಾ ಕಾಲೋನಿ ನಿವಾಸಿ, ಕೂಲಿ ಕೆಲಸ ಮಾಡುತ್ತಿದ್ದ ಸೈಯದ್ ಯೂನುಸ್ (26) ಎಂಬಾತನನ್ನು ಬಂಧಿಸಿದ್ದಾರೆ.

​ಆರೋಪಿಯಿಂದ ಕಳವು ಮಾಡಲಾಗಿದ್ದ 5.340 ಗ್ರಾಂ ತೂಕದ ಚಿನ್ನದ ಸರ, 20 ಗ್ರಾಂ ತೂಕದ ಬೆಳ್ಳಿಯ ಕರಿಮಣಿ ಸರ, ಕೃತ್ಯಕ್ಕೆ ಬಳಸಿದ್ದ ಬಜಾಜ್ ಪಲ್ಸರ್ ಬೈಕ್ ಸೇರಿ ಒಟ್ಟು 1ಲಕ್ಷ 07ಸಾವಿರದ 300 ರೂ. ಮೌಲ್ಯದ ಸ್ವತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

​ಉತ್ತರಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ ಹಾಗೂ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ರಾಣು ಗುಪ್ತಾ ಅವರ ಮಾರ್ಗದರ್ಶನದಲ್ಲಿ, ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸ್ ನಿರೀಕ್ಷಕ ದಿವಾಕರ್ ಪಿ.ಎಮ್, ಉಪನಿರೀಕ್ಷಕರಾದ ಭರಮಪ್ಪ ಬೆಳಗಲಿ, ಮಲ್ಲಿಕಾರ್ಜುನಯ್ಯ ಕುರಾಣಿ ಹಾಗೂ ಸಿಬ್ಬಂದಿಗಳಾದ ಮಂಜುನಾಥ ಗೊಂಡ, ಈರಣ್ಣ ಪೂಜೇರಿ, ಬಾಗಪ್ಪ ಕಡಕಳ್ ಮತ್ತು ನಿಂಗನಗೌಡ ಪಾಟೀಲ್ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ಇಡೀ ತಂಡಕ್ಕೆ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.