ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಶಿರಸಿ(Sirsi) : ತಾಲೂಕಿನ ಹುಲೇಕಲ್ ಗ್ರಾಮದ(Hulekal village) ಹೆಂಚಟಾರದಲ್ಲಿರುವ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ನಡೆದ ಕಳ್ಳತನ(Theft) ಪ್ರಕರಣವನ್ನು ಶಿರಸಿ ಗ್ರಾಮೀಣ ಪೊಲೀಸ್ ಠಾಣೆ(Sirsi Rural Police Station) ಯಶಸ್ವಿಯಾಗಿ ಭೇದಿಸಿದೆ. ಘಟನೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
2025ರ ಸೆಪ್ಟೆಂಬರ್ 10 ರಂದು ಮಧ್ಯರಾತ್ರಿ 1.15 ಗಂಟೆಯ ಸುಮಾರಿಗೆ, ದೇವಸ್ಥಾನದ ಸ್ಟೀಲಿನ ಬಾಗಿಲು ಒಡೆದು, ದೇವರ ಮೂರ್ತಿಯ ಮೇಲಿದ್ದ ಬಂಗಾರ ಮತ್ತು ಬೆಳ್ಳಿಯ ಆಭರಣಗಳು ಹಾಗೂ ಕಾಣಿಕೆ ಹುಂಡಿಯಲ್ಲಿದ್ದ ನಗದು ಹಣ ಸೇರಿ ಒಟ್ಟು ರೂ. 2,31,400 ಮೌಲ್ಯದ ವಸ್ತುಗಳನ್ನು ಕಳ್ಳರು ಕದ್ದು ಪರಾರಿಯಾಗಿದ್ದರು. ಈ ಬಗ್ಗೆ ದೇವಿಕೆರೆ ರಸ್ತೆಯ(Devikere Road) ನಿವಾಸಿ ಪರಶುರಾಮ ಎಂಬುವವರು ದೂರು ನೀಡಿದ್ದರು.
ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ತಮ್ಮ ತನಿಖೆಯಲ್ಲಿ ತಾಂತ್ರಿಕ ವಿಭಾಗದ ಸಹಾಯದಿಂದ ಶಂಕಿತ ಆರೋಪಿಗಳನ್ನು ಪತ್ತೆಹಚ್ಚಿ, ಬೆಂಗಳೂರು(Bangalore), ಶಿವಮೊಗ್ಗ(Shivamogga) ಹಾಗೂ ಭದ್ರಾವತಿ(Bhadravati) ಸೇರಿದಂತೆ ಹಲವೆಡೆ ಭೇಟಿ ನೀಡಿ ಮಾಹಿತಿಗಳನ್ನು ಸಂಗ್ರಹಿಸಿದರು. ಕೊನೆಗೆ ಹಾಲಿ ಬೆಂಗಳೂರು ನಿವಾಸಿ ಬಾಲಕುಮಾರ ತಂದೆ ವಾಸು ಕೆ. ಅಲಿಯಾಸ್ ಬಾಲರಾಜು ಸ್ವಾಮಿ, ಅಂತರಗಂಗೆ, ಭದ್ರಾವತಿ ಹಾಗೂ ಮಹಮ್ಮದ್ ಅಲಿ ತಂದೆ ಅಲಿಕಾಕಾ ಜಯರಾಜ್, ಅಂತರಗಂಗೆ, ಭದ್ರಾವತಿ ಎಂಬುವವರನ್ನ ಬಂಧಿಸಿದ್ದಾರೆ. ಬಂಧನದ ವೇಳೆ ರೂ. 1,50,000 ಮೌಲ್ಯದ ಬೆಳ್ಳಿಯ ಆಭರಣ ಮತ್ತು ರೂ. 60,000 ನಗದು ಜಪ್ತಿಪಡಿಸಲಾಗಿದೆ.
ಪೊಲೀಸರ ಸಾಹಸಕ್ಕೆ ಪ್ರಶಂಸೆ : ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್. ಐ.ಪಿಎಸ್, ಹೆಚ್ಚುವರಿ ಎಸ್.ಪಿ.ಗಳು ಹಾಗೂ ಶಿರಸಿ ಉಪ ವಿಭಾಗದ ಡಿವೈಎಸ್ಪಿ ಗೀತಾ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿತ್ತು. ಶಶಿಕಾಂತ ವರ್ಮಾ (ಪೋಲೀಸ್ ವೃತ್ತ ನಿರೀಕ್ಷಕರು) ಅವರ ನೇತೃತ್ವದಲ್ಲಿ, ಪಿ.ಎಸ್.ಐ ಸಂತೋಷಕುಮಾರ ಎಂ., ಪಿ.ಎಸ್.ಐ ಅಶೋಕ ರಾಠೋಡ ಹಾಗೂ ಸಿಬ್ಬಂದಿ ಪ್ರಕಾಶ ತಳವಾರ, ಮಹಾದೇವ ನಾಯ್ಕ, ವಿಘ್ನೇಶ್ವರ ಹೆಗಡೆ, ಮಹಾಂತೇಶ್, ಅರುಣಕುಮಾರ್, ದಾವುಲ್ ಸಾಬ್, ಲಕ್ಷ್ಮಣ, ಚೇತನ, ರವಿಕುಮಾರ್, ಗದಿಗೆಪ್ಪ ಮುಂತಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.ಈ ತಂಡದ ಶ್ರಮಕ್ಕೆ ಜಿಲ್ಲಾಧಿಕಾರಿ ದೀಪನ್ ಎಂ.ಎನ್. ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ : ಹೊನ್ನಾವರ ಮೂಲದ ಯಾಕೂಬ್ ಮುಖ್ಯಾಧಿಕಾರಿಯಾಗಿ ಬಡ್ತಿ.