ಕಾರವಾರ : ಭಾರತೀಯ ಹವಮಾನ ಇಲಾಖೆ ಆಗಸ್ಟ್ 02 ಮಧ್ಯ ರಾತ್ರಿಯಿಂದ 03 ರ ಬೆಳಿಗ್ಗೆ 08-30 ರವರೆಗೆ ಭಾರಿ ಮಳೆಯಾಗುವ ಸೂಚನೆ ನೀಡಿದ್ದರಿಂದ ಉತ್ತರಕನ್ನಡ ಜಿಲ್ಲೆಯ ಬಹುತೇಕ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಆಗಸ್ಟ್ 3 ರಂದು ಆರೇಂಜ್ ಅಲರ್ಟ್ ಘೋಷಿಸಿದ್ದು ಮಳೆ ಮುಂದುವರಿಯುವ ಸಾಧ್ಯತೆ ಇದೆ. ಹೀಗಾಗಿ ಹಳ್ಳಕೊಳ್ಳಗಳು ಭಾರಿ ಮಳೆಯಿಂದ ತುಂಬಿದ್ದು ಶಾಲಾ ಮಕ್ಕಳಿಗೆ ಶಾಲೆಗೆ ತೆರಳಲು ಅನಾನುಕೂಲವಾಗುವುದರ ಜೊತೆಗೆ ಅವಘಡಗಳು ಸಂಭವಿಸುವ ಸಾಧ್ಯತೆ ಇದೆ. ಜಿಲ್ಲೆಯ ತಾಲೂಕುಗಳಲ್ಲಿ ಹೆಚ್ಚಿನ ಮಳೆಯಾಗುತ್ತಿರುವುದರಿಂದ ಶಾಲಾ ಮಕ್ಕಳ ಹಿತದೃಷ್ಟಿಯಿಂದ ವಿಪತ್ತು ನಿರ್ವಹಣಾ ಕಾಯ್ದೆ 2005 ರ ಕಲಂ 34(ಎಮ್) ರಡಿ ಜಿಲ್ಲಾಧಿಕಾರಿ ಹಾಗೂ ಅಧ್ಯಕ್ಷರು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ರವರಿಗೆ ಪ್ರದತ್ತವಾದ ಅಧಿಕಾರದ ಮೇರೆಗೆ ರಜೆ ಘೋಷಿಸಲಾಗಿದೆ.
ಉತ್ತರಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಜೋಯಿಡಾ, ದಾಂಡೇಲಿ, ಶಿರಸಿ ಹಾಗೂ ಸಿದ್ದಾಪೂರ ತಾಲ್ಲೂಕಿನಾದ್ಯಂತ ಎಲ್ಲಾ ಸರ್ಕಾರಿ, ಸರ್ಕಾರಿ ಅನುದಾನಿತ, ಅನುದಾನರಹಿತ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ, ಪದವಿ ಪೂರ್ವ, ಐ.ಟಿ.ಐ ಹಾಗೂ ಡಿಪ್ಲೋಮಾ ಕಾಲೇಜುಗಳಿಗೆ ಆಗಸ್ಟ್ 03 ರಂದು ರಜೆ ನೀಡಲಾಗಿದೆ.
ಕಾರವಾರ ಮತ್ತು ಶಿರಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು, ಪದವಿಪೂರ್ವ ಶಿಕ್ಷಣ ಇಲಾಖೆ ಕಾರವಾರ ಹಾಗೂ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಹಾಗೂ ಈ ರಜಾ ಅವಧಿಯನ್ನು ಮುಂದಿನ ದಿನಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳುವಂತೆ ತಿಳಿಸಲಾಗಿದೆ.