ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಗೋಕರ್ಣ(Gokarn): ಮೀನುಗಾರಿಕಾ ಬೋಟ್ನಲ್ಲಿ ಮೀನು ಖಾಲಿ ಮಾಡಿ ಸ್ವಚ್ಛಗೊಳಿಸುವಾಗ ಸಂಭವಿಸಿದ ದುರಂತದಲ್ಲಿ ವಿಷಾನಿಲ ಸೇವಿಸಿ ಮೂವರು ಯುವ ಕಾರ್ಮಿಕರು ದುರಂತವಾಗಿ ಸಾವನ್ನಪ್ಪಿದ ಘಟನೆ ಗೋಕರ್ಣ ಸಮೀಪದ ತದಡಿ ಬಂದರಿನಲ್ಲಿ(Tadri Port) ಮಂಗಳವಾರ ಸಂಜೆ ನಡೆದಿದೆ. ಮತ್ತೊಬ್ಬ ಕಾರ್ಮಿಕ ತುರ್ತು ಚಿಕಿತ್ಸೆಯಿಂದ ಪ್ರಾಣಪಾಯದಿಂದ ಪಾರಾಗಿದ್ದಾನೆ.
ಸಾವನ್ನಪ್ಪಿದ ಕಾರ್ಮಿಕರೆಲ್ಲರೂ ಕುಮಟಾ(Kumta) ತಾಲೂಕಿನ ನಿವಾಸಿಗಳಾಗಿದ್ದು, ವನ್ನಳ್ಳಿಯ ಅಮನ್ ಅಯ್ಯದ್ ಲಂಗಡೋ (18), ಕಾಗಾಲದ ನೌಶಾದ್ ಅಲಿಶಾ ರಾಜನ್ (35) ಹಾಗೂ ಕಾಗಾಲದ ಅಮೀರ್ ಅಬ್ದುಲ್ ಉಂಚಳ್ಳಿ (20) ಎಂದು ಗುರುತಿಸಲಾಗಿದೆ.
ಸಂಭವಿಸಿದ್ದು ಹೇಗೆ? : ‘ಕುಜೈನಿ’ ಹೆಸರಿನ ಮೀನುಗಾರಿಕಾ ಬೋಟ್ ಸಮುದ್ರದಲ್ಲಿ ಮೀನುಗಾರಿಕೆ ಮುಗಿಸಿ ತದಡಿ ಬಂದರಿಗೆ ಆಗಮಿಸಿತ್ತು. ಬೋಟ್ನಲ್ಲಿದ್ದ ಮೀನುಗಳನ್ನು ಖಾಲಿ ಮಾಡಿದ ನಂತರ, ಬೋಟ್ನ ಕೋಲ್ಡ್ ಸ್ಟೋರೇಜ್ (ಮಂಜುಗಡ್ಡೆ ಇಡುವ ಕೊಠಡಿ) ಸ್ವಚ್ಛಗೊಳಿಸಲು ಕಾರ್ಮಿಕರು ಇಳಿದಿದ್ದರು. ಈ ವೇಳೆ ಕೊಠಡಿಯಲ್ಲಿದ್ದ ಅಪಾಯಕಾರಿ ವಿಷಾನಿಲ ಹೊರಸೂಸಿದ್ದು, ಅದನ್ನು ಸೇವಿಸಿದ ಮೂವರು ಸ್ಥಳದಲ್ಲೇ ಅಸ್ವಸ್ಥಗೊಂಡು ಕೊನೆಯುಸಿರೆಳೆದಿದ್ದಾರೆ ಎಂದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ.
ಆಸ್ಪತ್ರೆ ಮುಂದೆ ಮುಗಿಲುಮುಟ್ಟಿದ ಆಕ್ರಂದನ: ಘಟನೆ ನಡೆದ ತಕ್ಷಣ ಬೋಟ್ನಲ್ಲಿದ್ದ ಎಲ್ಲರನ್ನೂ ಗೋಕರ್ಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಯಿತು. ಈ ಪೈಕಿ ಓರ್ವ ಕಾರ್ಮಿಕನಿಗೆ ನೀಡಿದ ತುರ್ತು ಚಿಕಿತ್ಸೆ ಫಲಕಾರಿಯಾಗಿದ್ದು, ಆತ ಪ್ರಾಣಪಾಯದಿಂದ ಪಾರಾಗಿದ್ದಾನೆ. ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆಯ ಆವರಣಕ್ಕೆ ಧಾವಿಸಿದ ಮೃತರ ಕುಟುಂಬಸ್ಥರ ಹಾಗೂ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು.
ಪೊಲೀಸ್ ಭೇಟಿ ಹಾಗೂ ಪರಿಶೀಲನೆ: ಘಟನಾ ಸ್ಥಳಕ್ಕೆ ಗೋಕರ್ಣ ಪೊಲೀಸ್ ಇನ್ಸ್ಪೆಕ್ಟರ್ (ಪಿಐ) ಶ್ರೀಧರ ಎಸ್.ಆರ್. ಹಾಗೂ ಪಿಎಸ್ಐ ಅನಿಲ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಮುಂದುವರಿದಿದೆ.