ಕಾರವಾರ : ಅವೈಜ್ಞಾನಿಕ ಮತ್ತು ಅಪೂರ್ಣ ಕಾಮಗಾರಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಯ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮೂಲಕ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದರು.
ಒಂದು ದಶಕದಿಂದ ಜಿಲ್ಲೆಯ ಕರಾವಳಿ ಭಾಗದಲ್ಲಿ ಅಂದರೆ ಭಟ್ಕಳ ಗಡಿ ಭಾಗದಿಂದ ಕಾರವಾರದ ಗಡಿಭಾಗದವರೆಗೆ ಚತುಷ್ಪತ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಆದರೆ ಗುತ್ತಿಗೆ ಪಡೆದ ಐ ಆರ್ ಬಿ ಕಂಪನಿ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸುತ್ತಿದ್ದು ಅಪೂರ್ಣ ಕಾಮಗಾರಿ ಮಾಡಲಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಅಪೂರ್ಣವಾಗಿರುವ ಕಾಮಗಾರಿಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಬೇಕು. ಅವೈಜ್ಞಾನಿಕವಾಗಿ ನಿರ್ಮಿಸಿರುವ ಹಾಗೂ ಕಾಮಗಾರಿಯಿಂದ ಸಮಸ್ಯೆಗೆ ಒಳಗಾಗುತ್ತಿರುವ ಪ್ರದೇಶದಲ್ಲಿ ಪುನರ್ ಕಾಮಗಾರಿ ನಡೆಸಬೇಕು. ಜಿಲ್ಲೆಯಾದ್ಯಂತ ಗುಡ್ಡ ಕುಸಿವ ಆತಂಕ ಎದುರಾಗಿದ್ದು, ಕೂಡಲೇ ಕಂಪನಿಯ ಮೂಲಕ ಸುರಕ್ಷಿತ ಕ್ರಮಕ್ಕೆ ಮುಂದಾಗಬೇಕು. ಭಟ್ಕಳ ಗಡಿಯಿಂದ ಕಾರವಾರದ ಗಡಿಯವರಿಗೆ ಸುರಕ್ಷಿತ ತಡೆಬೇಲಿ( ಬ್ಯಾರಿಕೇಡ್ )ನಿರ್ಮಿಸಿ ಜಾನುವಾರುಗಳು ಮತ್ತು ಸಾರ್ವಜನಿಕರ ಸುರಕ್ಷತೆ ಕಾಪಾಡಬೇಕೆಂದು ತಿಳಿಸಿದ್ದಾರೆ.
ಅಂಕೋಲಾ ಮತ್ತು ಕಾರವಾರ ತಾಲೂಕುಗಳ ಗಡಿಭಾಗದಲ್ಲಿ ಕಳೆದ ಒಂದು ದಶಕದಿಂದ ಅಲ್ಲಿನ ಕರಿದೇವರ ಗುಡ್ಡದ ಮೇಲೆ ಕಾಮಗಾರಿಯ ನೆಪದಲ್ಲಿ ಸಾವಿರಾರು ಟನ್ ಕಲ್ಲುಗಳನ್ನು ಬೇರೆಡೆ ಸಾಗಿಸಲಾಗಿದ್ದು ಈ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಜಿಲ್ಲಾಡಳಿತ ಮತ್ತು ಸಂಬಂಧಿಸಿದ ಅಧಿಕಾರಿಗಳ ಮೂಲಕ ಅವು ಯಾರಿಂದ ಎಲ್ಲಿಗೆ ಹೋಗಿವೆ ಎನ್ನುವುದರ ಮಾಹಿತಿ ಒದಗಿಸಬೇಕು. ಹಾಗೂ ಹತ್ತು ವರ್ಷಗಳಿಂದ ಅಲ್ಲಿ ಯಾವುದೇ ರಸ್ತೆ ಕಾಮಗಾರಿ ನಡೆಯದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಹಟ್ಟಿಕೇರಿ ಟೋಲ್ ಪ್ಲಾಜಾ ಬಳಿಯ ಕೇವಲ 10 ಕಿ.ಮೀ ವ್ಯಾಪ್ತಿ ಒಳಗಿನ ಈ ಪ್ರದೇಶದಲ್ಲಿ ಕಾಮಗಾರಿಯಾಗದ ಕುರಿತು ಕಂಪನಿ ಸ್ಪಷ್ಟೀಕರಣ ನೀಡಬೇಕು. ಅಲ್ಲಿಯವರೆಗೆ ಟೋಲ್ ಸಂಗ್ರಹ ನಿಲ್ಲಿಸುವಂತೆ ಎಚ್ಚರಿಕೆ ನೀಡಬೇಕು.
ಅಂಕೋಲಾ ತಾಲ್ಲೂಕಿನಲ್ಲಿ ನೀಲಾಂಪುರ ಕ್ರಾಸ್ ಬಳಿ ಬೈಪಾಸ್ ಇಲ್ಲವೇ ವ್ಯವಸ್ಥಿತ ಸರ್ಕಲ್ ನಿರ್ಮಿಸಿ ಜನರ ಬದುಕಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಮಾದನಗಿರಿ ಗೋಕರ್ಣ ಕೂಡು ರಸ್ತೆಯಲ್ಲಿ ಜನರ ಬೇಡಿಕೆಯಂತೆ ಬೈಪಾಸ್ ನಿರ್ಮಿಸಬೇಕು.
ರಾಷ್ಟ್ರೀಯ ಹೆದ್ದಾರಿಯಲ್ಲಿ ವಿದ್ಯುತ್ ದೀಪಗಳು ಮತ್ತು ಗಿಡಗಳನ್ನು ನೆಡಲು ಕ್ರಮ ಕೈಗೊಳ್ಳಬೇಕು. ಒಟ್ಟಾರೆಯಾಗಿ ಜಿಲ್ಲೆಯ ವಿವಿಧಡೆ ಅಪೂರ್ಣವಾಗಿರುವ ಕಾಮಗಾರಿಗಳನ್ನು ಕೂಡಲೇ ಪೂರ್ಣಗೊಳಿಸಲು ತಾಕೀತು ಮಾಡಬೇಕು.
ಮೇಲಿನ ಬೇಡಿಕೆಗಳನ್ನು ಈಡೇರಿಸುವಂತೆ ಜಯ ಕರ್ನಾಟಕ ಜನಪರ ವೇದಿಕೆ ಅಗ್ರಹಿಸಿದೆ. ಇಲ್ಲದಿದ್ದಲ್ಲಿ ಜಿಲ್ಲೆಯಾದ್ಯಂತ ಜನರ ಸುರಕ್ಷತೆಗೆ ಮತ್ತು ಸಾರ್ವಜನಿಕ ಹಿತಾಸಕ್ತಿಯಿಂದ ಪ್ರತಿಭಟನೆ ಮಾಡುವುದು ಅನಿವಾರ್ಯವಾಗಲಿದೆ ಎಂಡು ಎಚ್ಚರಿಸಿದೆ. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ದಿಲೀಪ್ ಜಿ ಅರ್ಗೇಕರ, ಜಿಲ್ಲಾ ಕಾರ್ಯಧ್ಯಕ್ಷ ರೋಷನ್ ಹರಿಕಂತ್ರ, ಜಿಲ್ಲಾ ಕಾರ್ಯದರ್ಶಿ ಸುದೇಶ್ ನಾಯ್ಕ, ಜಿಲ್ಲಾ ಸಂಚಾಲಕರು ಸುನಿಲ್ ತಾಂಡೇಲ್, ತಾಲೂಕ್ಅಧ್ಯಕ್ಷ ಮೋಹನ್ ಉಳ್ಬೇಕರ್, ತಾಲೂಕ್ ಕಾರ್ಯಾಧ್ಯಕ್ಷ ವಿನಯ್ ನಾಯ್ಕ, ಸಂಘಟನೆ ಪ್ರಮುಖರಾದ ಪ್ರವೀಣ್ ತಾಂಡೇಲ್. ಕೃಷ್ಣ ಹರಿಕಂತ್ರ. ದಿಲೀಪ್ ನಾಗೇಕರ್ ಉಪಸ್ಥಿತರಿದ್ದರು