ಕಾರವಾರ : ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಇಂದು ನಡೆಯಲಿರುವ ಹೋರಾಟದಲ್ಲಿ ಪಾಲ್ಗೊಳ್ಳಲು  ಉತ್ತರಕನ್ನಡ ಜಿಲ್ಲೆಯ  ಸರ್ಕಾರಿ ಕಿರಿಯ, ಹಿರಿಯ ಪ್ರಾಥಮಿಕ ಶಾಲೆಗಳ ಸಾವಿರಾರು ಪ್ರಾಥಮಿಕ ಶಾಲಾ ಶಿಕ್ಷಕರು ಬೆಂಗಳೂರಿಗೆ ತೆರಳಿದ್ದಾರೆ.

ರಾಜ್ಯ ಸಂಘದ ನಿರ್ಣಯ ಹಾಗೂ ಸೂಚನೆಯಂತೆ
ಶಿಕ್ಷಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ  ಪ್ರಾಥಮಿಕ ಶಾಲಾ ಶಿಕ್ಷಕರು ಸಾಮೂಹಿಕವಾಗಿ ತಮ್ಮ ಹಕ್ಕಿಗೋಸ್ಕರ ಸಾಂದರ್ಭಿಕ ರಜೆಗಳನ್ನು ಹಾಕಿ  ಶಿಕ್ಷಕರು ಭಾಗವಹಿಸುತ್ತಿದ್ದಾರೆ.  ಪ್ರಾಥಮಿಕ ಶಾಲಾ ಶಿಕ್ಷಕರಾಗಿ(ಪಿಎಸ್‌ಟಿ) ನೇಮಕಗೊಂಡವರಿಗೆ ಬಡ್ತಿ ದೊರಕುತ್ತಿಲ್ಲ. ಶೇ. 30 ರಷ್ಟು ಪಿಎಸ್‌ಟಿ ಶಿಕ್ಷಕರಿಗೆ ಜಿಪಿಟಿ ಶಿಕ್ಷಕರಾಗಿ ಬಡ್ತಿ ನೀಡುವುದಾಗಿ ಭರವಸೆ ನೀಡಿದ್ದರೂ, ಇದುವರೆಗೂ ಬಡ್ತಿ ನೀಡಿಲ್ಲ. ಉಳಿದವರಿಗೆ ಸೇವಾ ಜೇಷ್ಠತೆ ಆಧಾರದಲ್ಲಿ ಬಡ್ತಿ ನೀಡುತ್ತಾರೆ. ಆದರೆ ಪಿಎಸ್‌ಟಿ ಶಿಕ್ಷಕರಿಗೆ ಬಡ್ತಿ ನೀಡಲು ಪರೀಕ್ಷೆ ಮಾಡುವುದಾಗಿ ತಿಳಿಸುತ್ತಾರೆ. ಜಿಪಿಟಿ ಶಿಕ್ಷಕರ ವ್ಯವಸ್ಥೆ ಪ್ರಾರಂಭವಾಗಿ ಹತ್ತು ವರ್ಷವೂ ಆಗಿಲ್ಲ ಆದರೆ ಬಡ್ತಿ ನೀಡುವಾಗ ಪಿಎಸ್‌ಟಿ ಶಿಕ್ಷಕರಿಗಿಂತ ಮೊದಲ ಆದ್ಯತೆ ಜಿಪಿಟಿ ಶಿಕ್ಷಕರಿಗೆ ನೀಡಲಾಗುತ್ತಿದೆ. 34 ವರ್ಷಗಳ ಹಿಂದೆ ಪಿಎಸ್‌ಟಿ ಶಿಕ್ಷಕರಾಗಿ ನೌಕರಿಗೆ ಸೇರಿದವರಿಗೆ ಇದುವರೆಗೂ ಬಡ್ತಿ ನೀಡಿಲ್ಲ. ಅವರು ಪಿಎಸ್‌ಟಿ ಶಿಕ್ಷಕರಾಗಿಯೇ ಮುಂದುವರೆದಿದ್ದಾರೆ. ವರ್ಗಾವಣೆ ಕೌನ್ಸಿಲಿಂಗ್‌ನಲ್ಲೂ ಪಿಎಸ್‌ಟಿ ಅವರಿಗೆ ಅವಕಾಶವಿಲ್ಲ. ಹೊಸ ಜಿಪಿಟಿ ಶಿಕ್ಷಕರನ್ನೂ ನೇಮಕ ಮಾಡಿಕೊಳ್ಳುತ್ತಿಲ್ಲ. ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗುತ್ತಿದೆ ಎನ್ನುವುದು ಪಿಎಸ್‌ಟಿ ಶಿಕ್ಷಕರ ಆಳಲಾಗಿದೆ.

ಹೀಗಾಗಿ ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಮುಷ್ಕರದಲ್ಲಿ ಜಿಲ್ಲೆಯ ಎಲ್ಲ ಪ್ರಾಥಮಿಕ ಶಾಲೆಯ ಶಿಕ್ಷಕರು ಪಾಲ್ಗೊಂಡಿದ್ದಾರೆ.

ಡಿಡಿಪಿಐ ಸೂಚನೆ : ಸೋಮವಾರದಂದು ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಪಾಠಗಳು ಎಂದಿನಂತೆ ನಡೆಸಬೇಕು. ಅನಗತ್ಯ  ಗೊಂದಲ ಸೃಷ್ಟಿಸಿ, ಮುಷ್ಕರದಲ್ಲಿ ಪಾಲ್ಗೊಂಡು,  ಶಾಲೆಗಳನ್ನು ಮುಚ್ಚಿರುವುದು ಕಂಡು ಬಂದರೆ ಅಂತಹ ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರ ವಿರುದ್ಧ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ(ನಡತೆ) ನಿಯಮಗಳು-2021 ರ ಅನ್ವಯ ನಿಯಮಾನುಸಾರ ಅಗತ್ಯ ಶಿಸ್ತು ಕ್ರಮ ಕೈಗೊಳ್ಳುವಂತೆ ಕ್ಷೇತ್ರ  ಶಿಕ್ಷಣಾಧಿಕಾರಿಗಳಿಗೆ ಕಾರವಾರದ ಡಿಡಿಪಿಐ ಪತ್ರ ಬರೆದಿದ್ದಾರೆ.