ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ತಾಲೂಕಿನ ಕೊಡಿಭಾಗದ ಅಳ್ವೇವಾಡ ಪ್ರದೇಶದಲ್ಲಿ ಮಂಗಳವಾರ ವ್ಯಕ್ತಿಯೋರ್ವನ‌ ಮೃತದೇಹ ನೀರಿನಲ್ಲಿ ತೇಲಿ ಬಂದಿದೆ.

ತಾಲೂಕಿನ ಅಳ್ವೇವಾಡ–ಕೋಡಿಭಾಗ ಪ್ರದೇಶದಲ್ಲಿ ನೀರಿನಲ್ಲಿ ಮೃತದೇಹ ತೇಲುತ್ತಿರುವುದನ್ನು ಸಾರ್ವಜನಿಕರು ಗಮನಿಸಿ ಸಂಬಂಧಿಸಿದವರಿಗೆ ಮಾಹಿತಿ ನೀಡಿದ್ದರು. ಕರಾವಳಿ ಕಾವಲು ಪಡೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸ್ಥಳೀಯ ಮೀನುಗಾರರ ಸಹಾಯದಿಂದ ನೀರಿನಲ್ಲಿ ತೇಲುತ್ತಿದ್ದ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ.

ಶಿರವಾಡದ ವೆಂಕಟೇಶ್ ರಾಮಚಂದ್ರ ವಡ್ಡರ (38) ಮೃತ ದುರ್ದೈವಿ. ಕೆಲ ದಿನಗಳ ಹಿಂದೆ ವೆಂಕಟೇಶನ ಪತ್ನಿ ಮನಸ್ತಾಪ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು ಎನ್ನಲಾಗಿದೆ. ಇದರಿಂದ ಮನನೊಂದು ಈತ ಮನೆಯಿಂದ ನಾಪತ್ತೆಯಾಗಿದ್ದ. ಆಗಲೇ ಈತ ಕಾಳಿ ನದಿಗೆ ಜಿಗಿದಿರಬಹುದು ಎಂದು ಹೇಳಲಾಗುತ್ತಿದೆ. ಘಟನಾ ಸ್ಥಳಕ್ಕೆ ಕಾರವಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.