ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಮಂಗಳೂರು(Manglore) : ಇಲ್ಲಿನ ಪಾಂಡೇಶ್ವರದ ರಾಮಲಕ್ಷ್ಮಣ ಕನ್ವೆನ್ಷನ್ ಹಾಲ್‌ನಲ್ಲಿ ನಡೆದ ಸರ್ವ ಕಾಲೇಜು ಚುನಾವಣೆ(College Election) ಹಾಗೂ ಪದಗ್ರಹಣ ಸಮಾರಂಭದ ವೇಳೆ ಬಾಲ್ಕನಿ ತಡೆಗೋಡೆ ಕುಸಿದು ಬಿದ್ದ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ (St Alosius College) ವಿದ್ಯಾರ್ಥಿ ಶಮ್ಮಾಝ್ (16) ಮೃತ ದುರ್ದೈವಿ.
ಪಾಂಡೇಶ್ವರದಲ್ಲಿ (Pandeshwara) ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಮಿತಿಮೀರಿದ ಸಂಭ್ರಮಾಚರಣೆಯ ವೇಳೆ ಕಟ್ಟಡದ ಬಾಲ್ಕನಿಯ ತಡೆಗೋಡೆ ದಿಢೀರನೆ ಕುಸಿದುಬಿದ್ದಿದೆ. ಇದರ ಪರಿಣಾಮವಾಗಿ ಬಾಲ್ಕನಿಯಲ್ಲಿದ್ದ ನಾಲ್ವರು ವಿದ್ಯಾರ್ಥಿಗಳು ನೇರವಾಗಿ ರಸ್ತೆಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಮ್ಮಾಝ್ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾನೆ.
ಪ್ರಕರಣ ದಾಖಲು: ಘಟನೆಗೆ ಸಂಬಂಧಿಸಿದಂತೆ ಮೃತ ಬಾಲಕನ ತಂದೆ ನೀಡಿದ ದೂರಿನ ಮೇರೆಗೆ ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ(Pandeshwar Police Station) ಪ್ರಕರಣ ದಾಖಲಾಗಿದೆ. ಕಟ್ಟಡದ ಮಾಲೀಕರು ಹಾಗೂ ಕಾರ್ಯಕ್ರಮ ಆಯೋಜಕರ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎಂದು ಆರೋಪಿಸಲಾಗಿದೆ.
ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 106(1) (ನಿರ್ಲಕ್ಷ್ಯದಿಂದ ಸಾವು), 125(a), 125(b) (ಇತರರ ಜೀವಕ್ಕೆ ಅಪಾಯವನ್ನುಂಟು ಮಾಡುವುದು) ಹಾಗೂ 290 ರ ಅಡಿಯಲ್ಲಿ ಕಟ್ಟಡದ ಮಾಲೀಕ ಮತ್ತು ಆಯೋಜಕರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.