ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) : ಕೊಚ್ಚಿ: ದಾರಿ ಸಿಗದೇ ನಾಪತ್ತೆಯಾದ ಮೂವರು ಮಹಿಳೆಯರು (Womens) ಸತತ ಕಾರ್ಯಾಚರಣೆ ಬಳಿಕ ಪತ್ತೆಯಾದ ಘಟನೆ ಎರ್ನಾಕುಲಂ (Ernakulam) ಜಿಲ್ಲೆಯ ಕೋತಮಂಗಲಂನ  ಅಟ್ಟಿಕಲಂ ದಟ್ಟಡವಿಯಲ್ಲಿ ನಡೆದಿದೆ.

15 ಗಂಟೆಗಳ ಸುದೀರ್ಘ ಶೋಧದ ನಂತರ ಕೊನೆಗೂ ಪತ್ತೆ ಹಚ್ಚಲಾಗಿದೆ. ಮಹಿಳೆಯರ ನಾಪತ್ತೆಯಿಂದ ಕಂಗಾಲಾಗಿದ್ದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಅಟ್ಟಿಕಲಂನ ದಟ್ಟವಾದ ಕಾಡಿನಲ್ಲಿ ಕುಟ್ಟಂಪೂಳ ಪಂಚಾಯತ್ ನ ಅನಕ್ಕಯಂ ನಿವಾಸಿ ಮಾಯಾ ಅವರ ದನ ಮೇಯಲು ಹೋದಾಗ ನಾಪತ್ತೆಯಾಗಿತ್ತು.  ಸಂಜೆ ವೇಳೆ ಹಸು ವಾಪಾಸ್ಸಾಗಿದೆ. ಆದರೆ ಹಸುವನ್ನು (Cow) ಹುಡುಕಲು ತೆರಳಿದ ಮಾಯಾ(46), ಪಾರುಕುಟ್ಟಿ(64), ಡಾರ್ಲಿ(56)ಯವರ ಮನೆಗೆ ವಾಪಾಸ್ ಬಂದಿರಲಿಲ್ಲ.

ಮೂವರು ಮಹಿಳೆಯರ ನಾಪತ್ತೆ ಸುದ್ದಿ ವ್ಯಾಪಿಸುತ್ತಿದ್ದಂತೆ ಅವರ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಕಾಡಿನಲ್ಲಿ ನಾಪತ್ತೆಯಾಗಿದ್ದ ಮೂವರು ಮಹಿಳೆಯರಿಗೆ ಅರಣ್ಯ ಇಲಾಖೆ ಸಿಬ್ಬಂದಿಗಳು, ಪೊಲೀಸರು ಮತ್ತು ಅಗ್ನಿಶಾಮಕದಳದ ಸಿಬ್ಬಂದಿಗಳು, ಸ್ಥಳೀಯರು ಸುದೀರ್ಘವಾಗಿ ಹುಡುಕಾಟವನ್ನು ನಡೆಸಿದ್ದಾರೆ. ಹುಡುಕಾಟ ರಾತ್ರಿವರೆಗೂ ಮುಂದುವರಿದರೂ ಮಹಿಳೆಯರು ಪತ್ತೆಯಾಗಿರಲಿಲ್ಲ.

ಮೂವರು ಮಹಿಳೆಯರಲ್ಲಿ ಓರ್ವ ಮಹಿಳೆ ಮೊಬೈಲ್ ಫೋನ್ ಇತ್ತು. ಮರುದಿನ ಸಂಜೆ 4 ಗಂಟೆ ಸುಮಾರಿಗೆ ಆ ಮೊಬೈಲ್ ನಿಂದ ಕರೆ ಬಂದಿದ್ದು, ಮೊಬೈಲ್ ಕರೆಯನ್ನು ಆಧಾರವಾಗಿಟ್ಟು ಹುಡುಕಾಟ ನಡೆಸಿ ಮಹಿಳೆಯರನ್ನು ರಕ್ಷಿಸಲಾಗಿದೆ. ನಾಪತ್ತೆಯಾಗಿರುವ ಮಹಿಳೆಯರನ್ನು ದಟ್ಟ ಕಾಡಿನೊಳಗೆ ಸುಮಾರು 6 ಕಿ.ಮೀ. ದೂರದಲ್ಲಿ ಬಂಡೆಯೊಂದರ ಮೇಲೆ ಶೋಧ(Searching) ದಳ ಪತ್ತೆ ಮಾಡಿದೆ. ಆನೆಗಳ ಭಯದಿಂದ ಆಹಾರ ಮತ್ತು ನೀರು ಮತ್ತು ನಿದ್ದೆಯಿಲ್ಲದ ರಾತ್ರಿಯಿಡೀ ಕಾಡಿನಲ್ಲಿ ಅವರು ಕಳೆದಿದ್ದಾರೆ. ಮೂವರು ಮಹಿಳೆಯರ ಆರೋಗ್ಯ ಸ್ಥಿತಿಯು ಸ್ಥಿರವಾಗಿದೆ. ಮೂವರನ್ನು ರಕ್ಷಿಸಲಾಗಿದೆ. ಮೂವರನ್ನು ಕುಟ್ಟಂಪುಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಆರೋಗ್ಯ ತಪಾಸಣೆ ನಡೆಸಿ ಕುಟುಂಬದ ಜೊತೆ ಕಳುಹಿಸಲಾಗಿದೆ.