ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಭಟ್ಕಳ(Bhatkal): ಮುರಿನಕಟ್ಟೆ ಧ್ವಂಸ ಹಾಗೂ ನಂತರದ ಬೆಳವಣಿಗೆಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸುವ ವೇಳೆ ತಮ್ಮ ಹೆಸರು ಸೇರ್ಪಡೆ ಮಾಡಿರುವುದಕ್ಕೆ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾರಾಯಣ ನಾಯ್ಕ ಖಂಡಿಸಿದ್ದಾರೆ.
ಸೋಮವಾರ ಆಸರಕೇರಿ ವೆಂಕಟರಮಣ ದೇವಸ್ಥಾನದ ಸಭಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರುಮಾತನಾಡಿದರು.
ಮುರಿನಕಟ್ಟೆ ಪ್ರಕರಣದಲ್ಲಿ ತಮ್ಮ ಹೆಸರನ್ನು ಚಾರ್ಜ್ಶೀಟ್ನಲ್ಲಿ ಸೇರಿಸಿರುವುದಕ್ಕೆ ಆಕ್ಷೇಪವಿಲ್ಲ. ಆದರೆ ಪ್ರಕರಣದಲ್ಲಿ ಎಲ್ಲರಿಗೂ ಒಂದೇ ರೀತಿಯ ಕಾನೂನು ಕ್ರಮ ಜರುಗಬೇಕು ಎಂಬುದು ತಮ್ಮ ಬೇಡಿಕೆ ಎಂದು ಹೇಳಿದರು.
ಮುರಿನಕಟ್ಟೆ ಧ್ವಂಸ ಪ್ರಕರಣದ ನಂತರ ತಮ್ಮ ಕಡೆಯ 20ರಿಂದ 25 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಅವರಲ್ಲಿ ಸುಮಾರು 17 ಮಂದಿ ಪ್ರಕರಣ ಎದುರಿಸುತ್ತಿದ್ದಾರೆ ಎಂದು ಅವರು, ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರೂ ಕೆಲವೇ ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸಂಬಂಧಪಟ್ಟ ಮುಖಂಡರ ವಿರುದ್ಧವೂ ಕ್ರಮ ಕೈಗೊಳ್ಳಬೇಕಿತ್ತು ಎಂದು ಅವರು ಅಸಮಧಾನ ವ್ಯಕ್ತಪಡಿಸಿದರು.
ಮುರಿನಕಟ್ಟೆ ಘಟನೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಪೊಲೀಸರು ದ್ವಂದ್ವ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದ ಶ್ರೀಕಾಂತ “ಒಂದು ಕಣ್ಣಿಗೆ ಸುಣ್ಣ, ಒಂದು ಕಣ್ಣಿಗೆ ಬೆಣ್ಣೆ” ಎಂಬ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಮುರಿನಕಟ್ಟೆ ಧ್ವಂಸಕ್ಕೆ ಸಂಬಂಧಿಸಿದಂತೆ ಕೆಲವು ಮುಸ್ಲಿಂ ಮುಖಂಡರು ಹಾಗೂ ಕಾರ್ಯಕರ್ತರ ಪಾತ್ರದ ಬಗ್ಗೆ ವಿಡಿಯೋ ಸಾಕ್ಷ್ಯಗಳಿದ್ದರೂ ಅವರ ವಿರುದ್ಧ ಪ್ರಕರಣ ದಾಖಲಿಸಿಲ್ಲ ಎಂದು ಅವರು ಆರೋಪಿಸಿದರು.
ಎಫ್ಐಆರ್ನಲ್ಲಿ ಹೆಸರು ಇಲ್ಲದಿದ್ದರೂ ಕೆಲವು ಪ್ರಕರಣಗಳಲ್ಲಿ ಚಾರ್ಜ್ಶೀಟ್ ಸಲ್ಲಿಸುವ ಸಂದರ್ಭದಲ್ಲಿ ತಮ್ಮ ಹೆಸರು ಸೇರ್ಪಡೆ ಮಾಡಲಾಗಿದೆ. “ನನ್ನ ಹೆಸರು ಸೇರಿಸಿರುವುದಕ್ಕೆ ಆಕ್ಷೇಪವಿಲ್ಲ. ಆದರೆ ನನ್ನ ಹೆಸರು ಸೇರಿಸಿದ ರೀತಿಯಲ್ಲೇ ಪ್ರಕರಣಕ್ಕೆ ಸಂಬಂಧಿಸಿದ ಇತರ ಮುಸ್ಲಿಂ ಮುಖಂಡರ ಹೆಸರುಗಳನ್ನೂ ಪರಿಶೀಲಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು” ಎಂದು ಅವರು ಒತ್ತಾಯಿಸಿದರು.
ಪೊಲೀಸ್ ಇಲಾಖೆಯ ಮೇಲೆ ತಮಗೆ ಗೌರವವಿದೆ. ತಾವು 14 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ ಸಾಮಾಜಿಕ ಹಾಗೂ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದಾಗಿ ತಿಳಿಸಿದರು. ಯಾವುದೇ ಒತ್ತಡಕ್ಕೆ ಒಳಗಾಗಿ ತನಿಖೆ ನಡೆಸಬಾರದು. ಪ್ರಕರಣಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ಕಾನೂನುಬದ್ಧವಾಗಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ತಮ್ಮ ವಿರುದ್ಧ ವಿವಿಧ ಪ್ರಕರಣಗಳಲ್ಲಿ ನಿರಂತರವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆರೋಪಿಸಿದ ಅವರು, ಈ ಹಿಂದೆ ಕಾಶ್ಮೀರಿ ಫೈಲ್ಸ್ ಚಿತ್ರ ಪ್ರದರ್ಶನ, ದೇವಿನಗರ ನಾಮಫಲಕ, ತೆಂಗಿನಗುಂಡಿ ವೀರ ಸಾವರ್ಕರ್ ಪ್ರತಿಮೆ, ಪ್ರಧಾನಿ ಕಾರ್ಯಕ್ರಮದ ಬಸ್ ಬುಕ್ಕಿಂಗ್ ಹಾಗೂ ಪಿಎಸ್ಐ ರನ್ನೇಗೌಡ ಪ್ರಕರಣ ಸೇರಿದಂತೆ ಹಲವು ಘಟನೆಗಳನ್ನು ಪ್ರಸ್ತಾಪಿಸಿದರು. ಈ ಪ್ರಕರಣಗಳ ಕುರಿತು ಹಿಂದಿನ ಹಾಗೂ ಹಾಲಿ ಪೊಲೀಸ್ ಅಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಲಾಗಿದೆ. ಕೆಲವು ಪ್ರಕರಣಗಳು ರಾಜಕೀಯ ಒತ್ತಡದಿಂದ ದಾಖಲಾಗಿವೆ ಎಂದು ತಿಳಿಸಿದ್ದರೂ ಇದುವರೆಗೆ ಬಿ ರಿಪೋರ್ಟ್ ಸಲ್ಲಿಕೆಯಾಗಿಲ್ಲ ಎಂದು ಅವರು ಹೇಳಿದರು.
ತಮ್ಮ ವಿರುದ್ಧ ಎಷ್ಟೇ ಪ್ರಕರಣಗಳು ದಾಖಲಾದರೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದ ಶ್ರೀಕಾಂತ್ ನಾಯ್ಕ,“ಪ್ರಕರಣಗಳ ಭಯದಿಂದ ಸಾಮಾಜಿಕ ಹಾಗೂ ಸಂಘಟನಾ ಚಟುವಟಿಕೆಗಳಿಂದ ಹಿಂದೆ ಸರಿಯುವುದಿಲ್ಲ. ನಿರಂತರವಾಗಿ ಹೋರಾಟ ಮಾಡುತ್ತೇನೆ” ಎಂದರು.
ಮುರಿನಕಟ್ಟೆ ವಿವಾದದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ತಮ್ಮ ಹಾಗೂ ಪಕ್ಷದ ಕಾರ್ಯಕರ್ತರ ವಿರುದ್ಧವೂ ಪ್ರಕರಣಗಳನ್ನು ದಾಖಲಿಸುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಕಾರ್ಯದರ್ಶಿ ಸುಬ್ರಾಯ ದೇವಾಡಿಗ ಮಾತನಾಡಿ, ಹೋರಾಟದಲ್ಲಿ ಭಾಗವಹಿಸುವವರ ವಿರುದ್ಧ ಪ್ರಕರಣ ದಾಖಲಾಗುವುದು ಹೊಸದೇನಲ್ಲ. ಆದರೆ ಪ್ರಕರಣ ದಾಖಲಿಸುವ ಸಂದರ್ಭದಲ್ಲಿ ತನಿಖಾ ಅಂಶಗಳನ್ನು ಸಮಗ್ರವಾಗಿ ಪರಿಶೀಲಿಸಬೇಕು ಎಂದು ಹೇಳಿದರು.
ಶ್ರೀಕಾಂತ ನಾಯ್ಕ ಅವರ ಕೆಲವು ಪ್ರಕರಣಗಳಲ್ಲಿ ಎಫ್ಐಆರ್ ದಾಖಲಿಸುವ ಸಂದರ್ಭದಲ್ಲಿ ಹೆಸರು ಇಲ್ಲದಿದ್ದರೂ ಚಾರ್ಜ್ಶೀಟ್ ಸಲ್ಲಿಸುವ ವೇಳೆ ಹೆಸರು ಸೇರ್ಪಡೆ ಮಾಡಲಾಗಿದೆ ಎಂದು ಅವರು ಹೇಳಿದರು.
“ಶ್ರೀಕಾಂತ ನಾಯ್ಕ ಅವರನ್ನು ಮಾತ್ರ ಗುರಿಯಾಗಿಸಲಾಗುತ್ತಿದೆ ಎಂಬ ಪ್ರಶ್ನೆ ನಮ್ಮ ಮುಂದಿದೆ. ಪ್ರಕರಣಗಳು ಎಷ್ಟೇ ಬಂದರೂ ಕಾನೂನುಬದ್ಧವಾಗಿ ಎದುರಿಸಲು ನಾವು ಸಿದ್ಧ” ಎಂದರು.
ಮುರಿನಕಟ್ಟೆ ವಿವಾದದ ಹಿನ್ನೆಲೆಯಲ್ಲಿ ಮೇ 24ರಂದು ನಡೆದ ಘಟನೆಯ ಬಳಿಕ ಭಟ್ಕಳದಲ್ಲಿ ಪ್ರತಿಭಟನೆ, ಬಂದ್ ಹಾಗೂ ಪೊಲೀಸ್ ಬಂದೋಬಸ್ತ್ ಸೇರಿದಂತೆ ಹಲವು ಬೆಳವಣಿಗೆಗಳು ನಡೆದಿದ್ದವು. ನಂತರ ಜಿಲ್ಲಾಡಳಿತದ ಮಧ್ಯಸ್ಥಿಕೆಯಲ್ಲಿ ಮುರಿನಕಟ್ಟೆ ಮರುನಿರ್ಮಾಣದ ಕುರಿತು ಎರಡೂ ಸಮುದಾಯಗಳ ಮುಖಂಡರ ಒಮ್ಮತದ ನಿರ್ಧಾರದ ವರದಿಗಳೂ ಪ್ರಕಟವಾಗಿದ್ದವು ಎಂದು ಹೇಳಿದರು.