ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news)  ಕಾರವಾರ(Karwar): ಅಖಿಲ ಭಾರತ ಕಾಂಗ್ರೆಸ್ ಸೇವಾದಳದ ರಾಷ್ಟ್ರೀಯ ಮುಖ್ಯ ಸಂಯೋಜಕ ಬಿ. ವಿ.  ಶ್ರೀನಿವಾಸ್ ಅವರ ಆದೇಶದ ಮೇರೆಗೆ, ಮಹಾತ್ಮ ಗಾಂಧೀಜಿಯವರ 157ನೇ ಜಯಂತಿ ಅಂಗವಾಗಿ ಕಾರವಾರದ ನಂದನಗದ್ದಾದ ಶಿವಾಜಿ ಎಜುಕೇಶನ್ ಸೊಸೈಟಿಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಮಹಾತ್ಮ ಗಾಂಧೀಜಿ ಕ್ವಿಜ್ ಸ್ಪರ್ಧೆಯನ್ನು ಆಯೋಜಿಸಲಾಯಿತು.

ವಿದ್ಯಾರ್ಥಿಗಳಲ್ಲಿ ಮಹಾತ್ಮ ಗಾಂಧೀಜಿಯವರ ಜೀವನ, ಹೋರಾಟ, ವಿಚಾರಧಾರೆ ಹಾಗೂ ದೇಶದ ಸ್ವಾತಂತ್ರ್ಯ ಚಳವಳಿಯ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರವಾರ ಹಾಗೂ ಸುತ್ತಮುತ್ತಲಿನ ವಿವಿಧ ಕಾಲೇಜುಗಳ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಕ್ವಿಜ್ ಸ್ಪರ್ಧೆಯಲ್ಲಿ ಭಾಗವಹಿಸಿದರು.

ಕ್ವಿಜ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಶಿವಾಜಿ ಕಾಲೇಜಿನ B.Ed. ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿನಿ ಕುಮಾರಿ ತೆಹರಿನ್ ರಿಯಾಜ್ ಅಹಮದ್ ಗುಲಾಮಲಿ ಪಡೆದುಕೊಂಡರು. ಅವರಿಗೆ ಸ್ಯಾಮ್ಸಂಗ್ ಕಂಪನಿಯ ಮೊಬೈಲ್ ಫೋನ್ ಹಾಗೂ ಪ್ರಮಾಣಪತ್ರವನ್ನು ಬಹುಮಾನವಾಗಿ ನೀಡಲಾಯಿತು.

ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಸುಮಾರು 30 ವಿದ್ಯಾರ್ಥಿಗಳಿಗೆ ವಿವಿಧ ಬಹುಮಾನಗಳನ್ನು ನೀಡಲಾಯಿತು. ಇದರಲ್ಲಿ ಪವರ್ ಬ್ಯಾಂಕ್, ಸ್ಮಾರ್ಟ್ ವಾಚ್, ಇಯರ್‌ಬಡ್ಸ್, ಹೆಡ್‌ಫೋನ್ ಹಾಗೂ ಪ್ರಮಾಣಪತ್ರಗಳು ಸೇರಿದ್ದವು. ಅಲ್ಲದೆ, ಸುಮಾರು 100 ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನಗಳನ್ನು ವಿತರಿಸಲಾಯಿತು.

ಕ್ವಿಜ್ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಮಾಣಪತ್ರ ಹಾಗೂ ಊಟದ ವ್ಯವಸ್ಥೆ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಕಾರವಾರ ವಿಧಾನಸಭಾ ಕ್ಷೇತ್ರದ ಮುಖಂಡರಾದ ಗೋಪಾಲಕೃಷ್ಣ ನಾಯಕ್ ಅವರು ಮಾತನಾಡಿ, ವಿದ್ಯಾರ್ಥಿಗಳೊಂದಿಗೆ ತಮ್ಮ ಜ್ಞಾನ ಮತ್ತು ವಿಚಾರಗಳನ್ನು ಹಂಚಿಕೊಂಡರು. “ಕ್ವಿಜ್‌ನಂತಹ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ, ಸಾಮಾನ್ಯ ಜ್ಞಾನ ಹಾಗೂ ಇತಿಹಾಸದ ಅರಿವನ್ನು ಹೆಚ್ಚಿಸುತ್ತವೆ. ಇಂದಿನ ವಿದ್ಯಾರ್ಥಿಗಳೇ ನಾಳೆಯ ದೇಶದ ಭವಿಷ್ಯ. ಅವರ ಜ್ಞಾನ ಮತ್ತು ಪ್ರತಿಭೆಗೆ ಪ್ರೋತ್ಸಾಹ ನೀಡುವುದು ನಮ್ಮೆಲ್ಲರ ಜವಾಬ್ದಾರಿ” ಎಂದರು.

ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಟಿ. ನಾಯ್ಕ್ ಅವರು ಮಾತನಾಡಿ, ವಿದ್ಯಾರ್ಥಿಗಳು ಮಹಾತ್ಮ ಗಾಂಧೀಜಿಯವರ ಜೀವನ ಮತ್ತು ವಿಚಾರಧಾರೆಗಳ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳು ಇಂತಹ ಜ್ಞಾನಾಧಾರಿತ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಹಾಗೂ ಯಶಸ್ವಿಯಾಗಿ ಆಯೋಜಿಸುವಲ್ಲಿ ರಾಷ್ಟ್ರೀಯ ಸೇವಾದಳದ ಸಂಯೋಜಕ ಸೂರಜ್ ಜಿ ನಾಯ್ಕ್ ಹಾಗೂ ಯುವ ಕಾಂಗ್ರೆಸ್ ಸಾಮಾಜಿಕ ಜಾಲತಾಣ ರಾಜ್ಯ ಸಂಯೋಜಕ ಸೈಯದ್ ಅಶ್ರಫ್ ಖಾದ್ರಿ ಅವರು ಪ್ರಮುಖ ಜವಾಬ್ದಾರಿ ವಹಿಸಿದ್ದರು.

ಮಹಾತ್ಮ ಗಾಂಧೀಜಿ ಕ್ವಿಜ್ ಸ್ಪರ್ಧೆಯಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸಿ, ಕಾರ್ಯಕ್ರಮವನ್ನು ಅರ್ಥಪೂರ್ಣ ಹಾಗೂ ಸ್ಮರಣೀಯವಾಗಿಸಿದ ಎಲ್ಲಾ ಕಾಲೇಜಿನ ವಿದ್ಯಾರ್ಥಿಗಳನ್ನು ಕ್ವಿಜ್ ಸ್ಪರ್ಧೆಗೆ ಕಳುಹಿಸಿ, ಪ್ರೋತ್ಸಾಹಿಸಿ ಹಾಗೂ ಸಹಕರಿಸಿದ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರು ಮತ್ತು ಉಪನ್ಯಾಸಕರಿಗೂ ಹೃತ್ಪೂರ್ವಕ ಧನ್ಯವಾದಗಳನ್ನ ಸಲ್ಲಿಸಲಾಯಿತು.

ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲು ಅಗತ್ಯವಾದ ಸ್ಥಳ ಹಾಗೂ ಸೌಲಭ್ಯಗಳನ್ನು ಒದಗಿಸಿ ಸಹಕಾರ ನೀಡಿದ ಶಿವಾಜಿ ಎಜುಕೇಶನ್ ಸೊಸೈಟಿಯ ಆಡಳಿತ ಮಂಡಳಿ ಹಾಗೂ ಸಂಪೂರ್ಣ ತಂಡಕ್ಕೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸೇವಾದಳದ ಪದಾಧಿಕಾರಿಗಳಾದ ಸುರೇಖಾ ವಾರೇಕರ್, ರಾಮಕೃಷ್ಣ ನಾಯ್ಕ್, ವಸಂತ್ ನಾಯಕ,ಗಣೇಶ್ ನಾಯ್ಕ್ ಹಾಗೂ ಸಾಮಾಜಿಕ ಜಾಲತಾಣದ ಪದಾಧಿಕಾರಿಗಳಾದ ಜೈಸನ್ ಪಿಂಟು, ಮಸೂದ್, ರಮೇಶ್ ನಾಯ್ಕ್, ಆನಂದ್ ಗೌಡ, ಅಬೂಬಕ್ಕರ್ ಸಿದ್ದೀಕ್, ಅಬ್ಬುಝೌರ್, ಸಾಕಿಬ್ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಒಟ್ಟಾರೆ, ವಿದ್ಯಾರ್ಥಿಗಳಲ್ಲಿ ಮಹಾತ್ಮ ಗಾಂಧೀಜಿಯವರ ಕುರಿತು ಜ್ಞಾನ ಮತ್ತು ಅರಿವು ಮೂಡಿಸುವ ಜೊತೆಗೆ, ಅವರಲ್ಲಿ ಸ್ಪರ್ಧಾತ್ಮಕ ಮನೋಭಾವ ಹಾಗೂ ಸಾಮಾನ್ಯ ಜ್ಞಾನವನ್ನು ಬೆಳೆಸುವಲ್ಲಿ ಈ ಕ್ವಿಜ್ ಸ್ಪರ್ಧೆ ಮಾಡಲಾಯಿತು.