ಭಟ್ಕಳ : ಸಾಕು ನಾಯಿ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ.ಶ್ವಾನಗಳ ಪ್ರೀತಿ, ಒಡನಾಟ, ತುಂಟಾಟ ಮನೆಯವರೊಂದಿಗೆ ಹೊಂದಿಕೊಳ್ಳುವ ಗುಣ ಅಚ್ಚುಮೆಚ್ಚು.  ಮೂಕ ಪ್ರಾಣಿ ಮನುಷ್ಯರಿಗಿಂತ ಮಿಗಿಲು.

ಮನೆಯಲ್ಲಿ ಯಾರಿಗಾದರೂ ಅನಾರೋಗ್ಯ ಕಾಡಿದರೇ ಹೇಗೆ ಕಾಳಜಿ ವಹಿಸುತ್ತೇವೆಯೋ ಅದೇ ರೀತಿ ಸಾಕಿದ ಮುದ್ದಿನ ಶ್ವಾನಕ್ಕೆ ಅದೇ ರೀತಿ ಮಮಕಾರ ತೋರಿಸುತ್ತೇವೆ. ಮನೆಯ ಸದಸ್ಯನಂತಿರುವ ನಾಯಿ ಕಳೆದುಕೊಂಡರೆ ಆಗುವ ದುಃಖ ನೋವು ಅಷ್ಟಿಷ್ಟಲ್ಲ. ಹೌದು ಸಾಕಿದ ಶ್ವಾನ(DOG) ಅಗಲಿದಾಗ ಕುಟುಂಬವೊಂದರ ಸದಸ್ಯರು ವಿಧಿವಿಧಾನಗಳ ಮೂಲಕ ಅಂತ್ಯ ಸಂಸ್ಕಾರ ನಡೆಸಿದ್ದಾರೆ.

ಹೊನ್ನಾವರ (Honnavar) ತಾಲೂಕಿನ ಬೈಲೂರು ಗ್ರಾಮದ ಅಚ್ಚುತ್ ವೈದ್ಯ ಕುಟುಂಬದವರು ತಮ್ಮ ಮನೆಯ ಅಚ್ಚುಮೆಚ್ಚಿನ  ಸಾಕು ನಾಯಿಗೆ ವಿಧಿವತ್ತಾಗಿ  ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

ಕಳೆದ ಹನ್ನೊಂದು ವರ್ಷದ ಹಿಂದೆ ಲ್ಯಾಬ್ ಜಾತಿಯ ನಾಯಿಮರಿ ತಂದು ಬಂಟಿ ಅಂತ ಹೆಸರಿಟ್ಟು ಸಾಕಿದ್ದರು. ಹೆಸರಿಗೆ ತಕ್ಕಂತೆ ಬಂಟಿ ನೋಡಲು ಮುದ್ದು ಮುದ್ದಾಗಿತ್ತು. ಹನ್ನೊಂದು ವರ್ಷದಿಂದ ಕುಟುಂಬದೊಂದಿಗೆ ಬೆರೆತಿತ್ತು. ಬಂಧು-ಬಳಗ ಮನೆಗೆ ಬಂದ್ರೆ‌ ಅವರನ್ನ ಗುರುತಿಸಿ ಪ್ರೀತಿ ತೋರಿಸುತ್ತಿತ್ತು. ಮನೆಯವರು ಹೊರಗೆ ಹೊರಟರೆ ಮಕ್ಕಳಂತೆ ಬೆನ್ನು ಹತ್ತಿ ಹಠ ಮಾಡುತಿತ್ತು. ಬೈಕ್ ಮೇಲೆ ಕುಳಿತು ಎಲ್ಲೆಂದರಲ್ಲಿ ಸುತ್ತಾಡುತ್ತಿತ್ತು. ಮನೆಯಿಂದ ಕೆಲಸದ ನಿಮಿತ್ತ ಮನೆ ಸದಸ್ಯರು ಹೊರ ಹೋಗಿ ಬರುವ ತನಕ ದಾರಿಯನ್ನೇ ಕಾಯುತಿತ್ತು.

ಮನೆಯಲ್ಲಿ ಕೂಡ ಸಾಕು ನಾಯಿಗೆ ಪ್ರತ್ಯೇಕವಾಗಿ ಉಳಿಯಲು ಸಣ್ಣ ಕೊಠಡಿ ರೀತಿ ನಿರ್ಮಿಸಿ ಬೇಸಿಗೆ ಕಾಲದಲ್ಲಿ ಫ್ಯಾನ್ ಕೂಡ ಅಳವಡಿಸಿಕೊಟ್ಟಿದ್ದರು. ಮನೆ ಮಗನಗಿಂತ ಹೆಚ್ಚಾಗಿದ್ದ ಬಂಟಿ ಇದೀಗ ಕ್ಯಾನ್ಸರಿನಿಂದ ಜೂನ್ ನಾಲ್ಕರಂದು  ಸಾವನ್ನಪ್ಪಿದೆ. ಬಂಟಿ ಸಾವು ಕುಟುಂಬಸ್ಥರಿಗೆ ಅಘಾತ ತಂದಿದೆ.  . ಮೃತ ಬಂಟಿ ದೇಹದ ಮುಂದೆ ಕುಳಿತ ಹಿರಿಯರು, ಮಕ್ಕಳು ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಅಗಲಿದ ಪ್ರೀತಿಯ ಬಂಟಿಯ ಅಂತ್ಯಸಂಸ್ಕಾರ ಮನುಕುಲದ ಮಾದರಿಯಲ್ಲಿ ವಿಧಿ ವಿಧಾನದೊಂದಿಗೆ ನೆರವೇರಿಸಲಾಗಿದೆ. ಮನೆಮಂದಿಯೆಲ್ಲಾ ಸೇರಿಕೊಂಡು ಭಾವುಕರಾಗಿ ಅಂತಿಮ ವಿದಾಯ ಹೇಳಿದ್ದಾರೆ. ಮೃತಪಟ್ಟ ಹದಿನಾಲ್ಕು ದಿನದ ಕಾರ್ಯವನ್ನ ಕುಟುಂಬದವರು ಪೂರೈಸಿ ಸಂತಾಪ ಸೂಚಿಸಿದ್ದಾರೆ.