ಕುಮಟಾ:  ಜೆಎಂಎಫ್‌ಸಿ ನ್ಯಾಯಾಲಯವು ಅಪ್ರಾಪ್ತ ಬಾಲಕ ವಾಹನ ಚಾಲನೆ ಮಾಡಿದ್ದಕ್ಕೆ ಪೋಷಕರಿಗೆ  30 ಸಾವಿರ ರು. ದಂಡ ವಿಧಿಸಿ ತೀರ್ಪು ನೀಡಿದೆ.

ಕುಮಟಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಕುಮಟಾ ಜೆಎಂಎಫ್‌ಸಿ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಜೋಯ್ಲಿನ್ ಮೆಂಡೋನ್ಸಾ ಈ ತೀರ್ಪನ್ನ ನೀಡಿದ್ದಾರೆ.

ಯಾವುದೇ ವಾಹನ ಚಾಲನಾ ಪರವಾನಿಗೆ ಇಲ್ಲದ ಅಪ್ರಾಪ್ತ ಬಾಲಕರು ಅಜಾಗರೂಕತೆಯಿಂದ ವಾಹನ ಚಲಾಯಿಸುತ್ತಿದ್ದಾರೆ. ಹೆಲೈಟ್, ದಾಖಲೆ ಮತ್ತು ಲೈಸೆನ್ಸ್ ಇಲ್ಲದೆ ಚಾಲನೆ ಮಾಡಿದ ಕಾರಣಕ್ಕೆ 30 ಸಾವಿರ ರು. ದಂಡ ವಿಧಿಸಲಾಗಿದೆ. ಅಪ್ರಾಪ್ತ ಬಾಲಕನಾಗಿದ್ದರಿಂದ 25 ಸಾವಿರ ರು.. ಹೆಲೈಟ್ ಧರಿಸದೇ ಇರುವುದರಿಂದ 500 ರು., ದಾಖಲೆ ಇಲ್ಲದಿರುವುದಕ್ಕೆ 2 ಸಾವಿರ ರು., ಅಜಾಗರೂಕತೆಗೆ 2.5 ಸಾವಿರ ರು. ಸೇರಿ ಒಟ್ಟು 30 ಸಾವಿರ ರೂ. ದಂಡ ವಿಧಿಸಲಾಗಿದೆ.

ಪೋಷಕರು ಮತ್ತು ವಾಹನಗಳ ಮಾಲೀಕರು ಅಪ್ರಾಪ್ತ ಮಕ್ಕಳಿಗೆ ಯಾವುದೇ ವಾಹನ  ಚಾಲನೆಗೆ ಅವಕಾಶ ನೀಡಬಾರದು. ರಸ್ತೆ ಸುರಕ್ಷತಾ ಕ್ರಮಗಳನ್ನು ಪಾಲಿಸುವ ಮೂಲಕ ಅಪಘಾತಗಳನ್ನು ತಡೆಗಟ್ಟಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಜೋಯ್ಲಿನ್ ಮೆಂಡೊನ್ಸಾ ತಿಳಿಸಿದ್ದಾರೆ.

ಕುಮಟಾದಲ್ಲಿ ಸಂಚಾರ ನಿಯಮ ಕಟ್ಟುನಿಟ್ಟಾಗಿ ಜಾರಿಯಾಗಿದ್ದರೂ ಅಪ್ರಾಪ್ತರ ವಾಹನ ಚಾಲನೆ ಮಾಡುತ್ತಿರುವುದು ಬೆಳಕಿಗೆ ಬರುತ್ತಿದೆ. ಕುಮಟಾ ಪೊಲೀಸರು ಸಂಚಾರ ನಿಯಮವನ್ನು ಪಾಲಿಸುವಂತೆ ತಿಳಿಸುತ್ತಿದ್ದರು ಪ್ರಯೋಜನವಾಗುತ್ತಿಲ್ಲ . ವಾಹನ ಚಾಲನೆ ಪರವಾನಗಿ ಪಡೆಯಲು ಕನಿಷ್ಠ 18 ವರ್ಷ ತುಂಬಿರಬೇಕು. ಆದರೆ, 18 ವರ್ಷ ತುಂಬದ ಹಲವರು ವಾಹನ ಚಲಾಯಿಸಿ, ಸ್ಟಂಟ್ ಮಾಡುತ್ತಿರುವುದು ಕುಮಟಾ ಪೊಲೀಸರ ಗಮನಕ್ಕೆ ಬಂದಿತ್ತು. ಐ ಹಿನ್ನೆಲೆಯಲ್ಲಿ ಪ್ರಕರಣವೊಂದನ್ನ  ಸಿಪಿಐ ತಿಮ್ಮಪ್ಪ ನಾಯ್ಕ ಕುಮಟಾ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ದೋಷಾರೋಪಣ ವರದಿಯನ್ನು ಸಲ್ಲಿಕೆ ಮಾಡಿದ್ದರು. ಬುಧವಾರ ಆರೋಪ ಪಟ್ಟಿ ಪರಿಶೀಲಿಸಿದ ನ್ಯಾಯಾಧೀಶರು ದಂಡ ವಿಧಿಸಿ ಆದೇಶಿಸಿದ್ದಾರೆ.

ಹೀಗಾಗಿ ಪಾಲಕರು ಅಪ್ರಾಪ್ತರಿಗೆ ವಾಹನ ನೀಡುವ ಮೊದಲು ಯೋಚಿಸಿ. ಇಲ್ಲದಿದ್ದಲ್ಲಿ ದಂಡ ತೆತ್ತಲು ತಯಾರಾಗಿ.