ಕಾರ್ಕಳ : ಮೀನು ಮಾರಾಟ ಮಹಿಳೆಯೊಬ್ಬರು ದಾಸ್ತಾನಿಟ್ಟಿದ್ದ ಅಂಜಲ್ ಮೀನನ್ನ ಕದ್ದು ಮಾರಾಟ ಮಾಡಿದ ವ್ಯಕ್ತಿಯನ್ನ ಪೊಲೀಸರು ಪತ್ತೆ ಮಾಡಿದ ಘಟನೆ ಕಾರ್ಕಳದಲ್ಲಿ ನಡೆದಿದೆ.
ಮಾರುಕಟ್ಟೆಯಲ್ಲಿ ದುಬಾರಿ ಬೆಲೆಯ ಅಂಜಲ್ ಮೀನು ಕದ್ದ ಪ್ರಕರಣ ಇದಾಗಿದ್ದು ಕಾರ್ಕಳ ನಗರ ಪೊಲೀಸ್ ಠಾಣೆಯ ಪೊಲೀಸರು ಇಸ್ವಾಣ ಮೀನು ಮಾಲೀಕನು ಮತ್ತು ಕದ್ದವನು ಹಾಗೂ ತಿಂದವನ ನಡುವಿನ ರಾಜಿ ಸಂಧಾನದ ಮಾತುಕತೆಯ ಮೂಲಕ ಬಗೆಹರಿಸಿದ್ದಾರೆ.
ಕಾರ್ಕಳದ ಮೀನು ಮಾರುಕಟ್ಟೆಯಲ್ಲಿ ಜೂನ್ 9 ರಂದು ಮಾಲಾ ಎಂಬುವವರ 6500 ಮೌಲ್ಯದ ಅಂಜಲ್ (ಇಸ್ವಾಣ್ )ಮೀನು ಕಳುವಾಗಿತ್ತು. ಸಾಣೂರಿನ ಗ್ರಾಹಕರೊಬ್ಬರು ಹುಟ್ಟು ಹಬ್ಬದ ಕಾರ್ಯಕ್ರಮಕ್ಕಾಗಿ ವ್ಯಾಪಾರಿ ಮಾಲಾ ಅವರರಲ್ಲಿ ದುಬಾರಿ ಬೆಲೆಯ ಅಂಜಲ್ ಮೀನು ಬುಕ್ ಮಾಡಿದ್ದರು. ಅದರಂತೆ ಮಾಲಾ ಅವರು 6500 ಸಾವಿರ ಮೌಲ್ಯದ 6.50 ಕೆ.ಜಿ ತೂಕದ ಒಂದು ಅಂಜಲ್ ಮೀನು ಫ್ರಿಡ್ಜ್ ನಲ್ಲಿಟ್ಟಿದ್ದರು. ಮರುದಿನ ಗ್ರಾಹಕ ಮೀನು ಕೊಡುವಂತೆ ಕೇಳಿದಾಗ ಫ್ರಿಡ್ಜ್ ನಲ್ಲಿದ್ದ ಅಂಜಲ್ ಮೀನು ಕಳುವಾಗಿತ್ತು. ಮೀನು ಕದ್ದವನ ಪತ್ತೆ ಮಾಡಲು ಯತ್ನಿಸಿದರೂ ಕಳ್ಳ ಸಿಕ್ಕಿರಲಿಲ್ಲ.
ಹೀಗಾಗಿ ಮಾಲಾ ಅವರ ಪುತ್ರ ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದರು. ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ಸೂರಜ್ ಎಂಬಾತನನ್ನು ಕರೆದು ವಿಚಾರಿಸಿದ್ರು. ಆತ ಕುಡಿತಕ್ಕಾಗಿ ಅಂಜಲ್ ಮೀನು ಕದ್ದಿದ್ದನ್ನ ಒಪ್ಪಿಕೊಂಡಿದ್ದಾನೆ. ಒಂದು ಕ್ವಾರ್ಟರ್ ಮದ್ಯಕ್ಕಾಗಿ ಕೇವಲ 140 ರು.ಗೆ ಹೂವಿನ ವ್ಯಾಪಾರಿ ವಿಶಾಲ್ ಎಂಬಾತನಿಗೆ ಮಾರಾಟ ಮಾಡಿರೋದನ್ನ ಒಪ್ಪಿಕೊಂಡಿದ್ದಾನೆ. ಬಳಿಕ ಪೊಲೀಸರು ಮೀನು ಖರೀದಿಸಿದ್ದ ಹೂವಿನ ವ್ಯಾಪಾರಿಗೆ ಠಾಣೆಗೆ ಕರೆಯಿಸಿ ವಿಚಾರಿಸಿದಾಗ ಸತ್ಯ ಒಪ್ಪಿದ್ದಾನೆ.
ಠಾಣೆಯಲ್ಲಿ ಸಂಧಾನ ನಡೆದು ಅಂಜಲ್ ಮೀನಿನ ಹಣವನ್ನು ನೀಡಲು ಒಪ್ಪಿಕೊಳ್ಳಲಾಗಿದೆ. ಸದ್ಯ ಮೂರು ಸಾವಿರ ರು. ಪಾವತಿಸಿ, ಉಳಿದ ಮೊತ್ತವನ್ನು ಜೂ.27ಕ್ಕೆ ನೀಡುವುದಾಗಿ ಒಪ್ಪಿಕೊಂಡು, ಪೊಲೀಸರು ಮುಚ್ಚಳಿಕೆ ಬರೆಯಿಸಿ ಮನೆಗೆ ಕಳಿಸಿಕೊಟ್ಟಿದ್ದಾರೆ.