ಭಟ್ಕಳ : ತಾಲೂಕಿನ ವಿವಿಧಡೆ ಇರುವ ಚೆಕ್ ಪೋಸ್ಟ್ ಗಳನ್ನ ಬಿಗಿಗೊಳಿಸಬೇಕು. ಗೋವುಗಳನ್ನು ರಕ್ಷಣೆ ಮಾಡದಿದ್ದಲ್ಲಿ ತಾಲೂಕಿನ ಹಿಂದೂ ಸಂಘಟನೆ ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಯಕರ್ತರು ಸೇರಿ ಬೃಹತ್ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದಾರೆ.
ಮಣ್ಕುಳಿಯ ಬಿಜೆಪಿ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಭಟ್ಕಳ ಬಿಜೆಪಿ ಮಂಡಲ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ ಮಾತನಾಡಿ, ಭಟ್ಕಳದಲ್ಲಿ ಅಕ್ರಮವಾಗಿ, ಹಿಂಸಾತ್ಮಕವಾಗಿ ಗೋ ಕಳ್ಳರಿಂದ ಗೋ ಸಾಗಾಟ ನಡೆಯುತ್ತಿದೆ. ಈ ಬಗ್ಗೆ ಹಿಂದು ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಯಕರ್ತರು ಪೊಲೀಸರನ್ನು ಪ್ರಶ್ನಿಸಿದರೂ ಪೊಲೀಸ್ ಇಲಾಖೆಯಿಂದ ಗೋವುಗಳನ್ನು ರಕ್ಷಿಸುವ ಕೆಲಸ ನಡೆದಿಲ್ಲ. ನಮ್ಮ ಹಿಂದು ಸಂಘಟನೆ ಕಾರ್ಯಕರ್ತರು, ಬಿಜೆಪಿ ಕಾರ್ಯಕರ್ತರು ಸಾಕಷ್ಟು ಗೋವುಗಳನ್ನು ರಕ್ಷಿಸಿದ್ದಾರೆ. ಸದ್ಯಕ್ಕೆ ಭಟ್ಕಳದಲ್ಲಿ ಯಾವುದೇ ಪೊಲೀಸ್ ಚೆಕ್ ಪೋಸ್ಟ್ ಕೆಲಸ ನಿರ್ವಹಿಸದೆ ನಿಷ್ಕ್ರಿಯವಾಗಿದೆ. ಈ ಬಗ್ಗೆ ಇಲಾಖೆ ಎಚ್ಚೆತ್ತುಕೊಳ್ಳಬೇಕು. ಇಲ್ಲವಾದಲ್ಲಿ ಪಕ್ಷದಿಂದ ಬ್ರಹತ್ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.
ಮುರ್ಡೇಶ್ವರ ಸಮೀಪದ ಬಸ್ತಿಮಕ್ಕಿಯಲ್ಲಿ ಉಸ್ತುವಾರಿ ಸಚಿವರ ಮಾಲೀಕತ್ವದ ಬೀನಾ ವೈದ್ಯ ಇಂಟರ್ನ್ಯಾಷನಲ್ ಸ್ಕೂಲ್ ಜಾಗದ ಪಕ್ಕದಲ್ಲಿನ ಸರಕಾರದ ಅರಣ್ಯ ಭೂಮಿ ಒತ್ತುವರಿ ಮಾಡಿ ಅಲ್ಲಿನ ಮಣ್ಣು ಸಾಗಾಟ ಮಾಡಿದ ಆರೋಪವಿದೆ. ಸಂಬಂಧಪಟ್ಟ ಸಂಸ್ಥೆಯ ಮುಖ್ಯಸ್ಥರ ಮೇಲೆ ಕ್ರಮ ಕೈಗೊಳ್ಳದೆ ಕೆಲಸ ಮಾಡುತ್ತಿದ್ದವರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ಆದರೆ ಒತ್ತುವರಿ ಮಾಡಿದ್ದ ಅರಣ್ಯ ಭೂಮಿಯನ್ನು ಫೆನ್ಸಿಂಗ್ ಮಾಡಿಲ್ಲ. ಅರಣ್ಯ ಇಲಾಖೆ ಎಲ್ಲಾ ಜಾಗವನ್ನು ಇಲಾಖೆಯ ವಶಕ್ಕೆ ಪಡೆದುಕೊಳ್ಳಬೇಕು. ಇಲ್ಲವಾದಲ್ಲಿ ಭಾರತೀಯ ಜನತಾ ಪಾರ್ಟಿ ತಕ್ಕ ಉತ್ತರ ನೀಡಲಿದೆ ಎಂದು ಅವರು ಹೇಳಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ ಮಾತನಾಡಿ, ಗುರುವಾರ ರಾತ್ರಿ ಗ್ರಾಮೀಣ ಠಾಣೆಗೆ ಹಿಂದೂ ಸಂಘಟನೆ ಕಾರ್ಯಕರ್ತರು ತೆರಳಿ ಭಟ್ಕಳ ತಾಲೂಕಿನಾದ್ಯಂತ ಚೆಕ್ ಪೋಸ್ಟಗಳನ್ನು ಬಿಗಿ ಬಂದೋಬಸ್ತ್ ಮಾಡುವಂತೆ ಕೋರಿಕೊಂಡಿದ್ದರು. ಆದರೆ ಮೇಲಾಧಿಕಾರಿಗಳ ಗಮನಕ್ಕೆ ತನ್ನಿ ಎಂದು ಓರ್ವ ಪೋಲಿಸ್ ಅಧಿಕಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರಿಂದ ಭಟ್ಕಳದ ಪೊಲೀಸರಿಗೆ ಅವರ ಕಾರ್ಯವ್ಯಾಪ್ತಿಯಲ್ಲಿ ಕೆಲಸ ಮಾಡಲು ಸ್ವಾತಂತ್ರ್ಯ ಇಲ್ಲ ಎನ್ನುವುದು ಸ್ಪಷ್ಟವಾದಂತಾಗಿದೆ ಎಂದರು.
ಈ ಸಂದರ್ಭದಲ್ಲಿ ಪಶ್ಚಿಮ ಘಟ್ಟ ಸಂರಕ್ಷಣೆ ಕಾರ್ಯಪಡೆ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ, ತಾಲೂಕು ಕಾರ್ಯದರ್ಶಿ ಶ್ರೀನಿವಾಸ ನಾಯ್ಕ, ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ, ರಾಜ್ಯ ಹಿಂದುಳಿದ ಮೋರ್ಚಾ ಉಪಾಧ್ಯಕ್ಷ ಈಶ್ವರ ನಾಯ್ಕ, ಸುರೇಶ ನಾಯ್ಕ ಕೋಣೆಮನೆ, ಮೋಹನ ಇನ್ನಿತರರು ಹಾಜರಿದ್ದರು.