ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಇಡಗುಂಜಿ, ಹೊನ್ನಾವರ(Honnavar) : ಪ್ರಸಿದ್ದ ಧಾರ್ಮಿಕ, ಪೌರಾಣಿಕ ಕ್ಷೇತ್ರವಾದ ಇಡಗುಂಜಿಯಲ್ಲಿ ಗಣೇಶ ಉತ್ಸವ ಸಂಭೃಮದಿಂದ ಜರುಗುತ್ತಿದೆ. ಚತುರ್ಥಿಯ ಅಂಗವಾಗಿ ದೇವಾಲಯ ವಿಶೇಷವಾಗಿ ಕಂಗೊಳಿಸುತ್ತಿದೆ.
ಬೆಳಿಗ್ಗೆ ನಾಲ್ಕು ಗಂಟೆಯಿಂದ ಇಡಗುಂಜಿ ಶ್ರೀ ವಿನಾಯಕ ದೇವಾಲಯಕ್ಕೆ ಆಗಮಿಸುತ್ತಿರುವ ಭಕ್ತರು ಲೋಕನಾಯಕನ ದರ್ಶನ ಪಡೆಯುತ್ತಿದ್ದಾರೆ. ಇಡಗುಂಜಿ ಸುತ್ತಮುತ್ತಲಿನ ನಾಗರಿಕರು ತಮ್ಮ ತಮ್ಮ ಜಮೀನಿನಲ್ಲಿ ಬೆಳೆದ ಫಲ, ಫಲಾವಳಿಗಳನ್ನ ತಂದು ದೇವಾಲಯದ ಒಳಗೆ ಮಂಟಪ ಮಾಡುವ ಮೂಲಕ ಸೇವೆ ಸಲ್ಲಿಸಿದ್ದಾರೆ.
ಗಣೇಶ ಚತುರ್ಥಿ ಪ್ರಯುಕ್ತ ಬಾಲಗಣಪನಿಗೆ ವಿಶೇಷ ನೈವೇದ್ಯ ಮಾಡಲಾಗಿದೆ. 21 ಬಗೆಯ ಪಂಚಕಜ್ಜಾಯ ನೈವೇದ್ಯ ಸಮರ್ಪಿಸಲಾಯಿತು. ಆಗಮೋಕ್ತೊನುಸಾರ ದೇವರಿಗೆ ಮೂರು ಹೊತ್ತು ಪೂಜೆ ಸಲ್ಲಿಸಲಾಗುತ್ತದೆ. ಇಂದಿನ ದಿನ ಸುಮಾರು 52 ಕೆಜಿ ಪಂಚಕಜ್ಜಾಯ, ಕೊಪ್ಪರಿಗೆಯಲ್ಲಿ 360 ತೆಂಗಿನಕಾಯಿ ಸಮರ್ಪಣೆ ಮಾಡಲಾಗುತ್ತದೆ.
ಸುಮಾರು ಒಂದುವರೆ ಶತಮಾನಗಳ ಹಿಂದಿನ ಇತಿಹಾಸವಿರುವ ಜಗತ್ತಿನ ಏಕೈಕ ದ್ವಿದಂತ ದ್ವಿಭುಜ ಗಣಪನಾಗಿರುವುದರಿಂದ ಇಡಗುಂಜಿಯಲ್ಲಿ ವಿಶೇಷವಾಗಿ ವಿಜೃಂಭಣೆಯಿಂದ ಗಣೇಶ ಚತುರ್ಥಿ ಆಚರಿಸಲಾಗುತ್ತದೆ. ಭಕ್ತರ ನಾನಾ ಸೇವೆಗಳನ್ನ ಸ್ವೀಕರಿಸುತ್ತಿರುವ ಬಾಲಗಣಪ ರಾಷ್ಟ್ರಕ್ಕೆ ಲೋಕಕ್ಕೆ ಬಾಧಕ, ಕಂಠಕ ದೂರಿಕರಿಸಿ ಶಾಂತಿ ಅನುಗ್ರಹಿಸುವಂತೆ ದೇವಾಲಯದ ಪ್ರಧಾನ ಅರ್ಚಕರಾದ ಮಂಜುನಾಥ ಭಟ್ ವಿನಾಯಕನಲ್ಲಿ ಪ್ರಾರ್ಥಿಸಿಕೊಂಡಿದ್ದಾರೆ. ಸುರಿಯುವ ಮಳೆಯನ್ನು ಲೆಕ್ಕಿಸದೇ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರು.
ಗಣಪನದರ್ಶನಪಡೆದಸಚಿವರು : ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಚಿವರಾದ ಮಂಕಾಳ ವೈದ್ಯ ತಮ್ಮ ಪುತ್ರಿ ಬೀನಾ ಅವರೊಂದಿಗೆ ಮಧ್ಯಾಹ್ನ ಇಡಗುಂಜಿ ಶ್ರೀ ವಿನಾಯಕ ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದುಕೊಂಡರು. ಅಲ್ಲದೇ ವಿಶೇಷವಾಗಿ ಪ್ರಾರ್ಥಿಸಿಕೊಂಡರು. ಕ್ಷೇತ್ರ ಮತ್ತು ರಾಜ್ಯದ ಜನತೆಗೆ ಶ್ರೀ ಗಣಪ ಒಳ್ಳೆಯದು ಮಾಡಲಿ ಎಂದು ಬೇಡಿಕೊಂಡಿದ್ದಾರೆ.