ಕಾರವಾರ(KARWAR) : ಶ್ರಾವಣ ಮಾಸ(SHRAVAN MONTH) ಬಂದರೆ ಈ ದೇವಾಲಯಕ್ಕೆ ವಿಶೇಷ ಕಳೆ ಬರುತ್ತದೆ. ಸೋಮವಾರದಂದು ಭಕ್ತರು ದಂಡೇ ಹರಿದು ಬರುತ್ತೆ. ಇದು ಉತ್ತರಕನ್ನಡ(UTTARKANNADA) ಜಿಲ್ಲೆಯ ಕಾರವಾರದ ಅಮದಳ್ಳಿಯ ಶ್ರೀ ಬಂಟ ದೇವರ(AMADALLI SHRI BANTADEVA) ಮಹಿಮೆ.

ಅನಾದಿ ಕಾಲದ ದೇವಸ್ಥಾನ ಇದಾಗಿದ್ದು, ಭಕ್ತರು ಅಂದಿನಿಂದ ಇವತ್ತಿನವರೆಗೂ ಶ್ರದ್ಧಾ ಭಕ್ತಿಯಿಂದ ದೇವರಿಗೆ ನಡೆದುಕೊಂಡು ಬರುತ್ತಿದ್ದಾರೆ. ಶ್ರಾವಣ ಮಾಸದ ಸೋಮವಾರ ಇಲ್ಲಿ ಭಕ್ತರಿಂದ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ಬೆಳಿಗ್ಗೆ ಮಹಾದೇವಸ್ಥಾನದಲ್ಲಿ ಮೊದಲ ಪೂಜೆ ಜರುಗಿದ ಬಳಿಕ ವಾದ್ಯಗಳ ಮೂಲಕ ಪೂಜಾ ಸಾಮಾಗ್ರಿಗಳನ್ನ ಹೊತ್ತು ಭಕ್ತರು ಬಂಟ ದೇವಸ್ಥಾನದ ಕಡೆ ಹೆಜ್ಜೆ ಹಾಕುತ್ತಾರೆ. 

ಸುಂದರ ಪರಿಸರದ ನಡುವೆ ಇರುವ ದೇವಾಲಯ ಬಂದವರನ್ನು ಆಕರ್ಷಿಸುತ್ತದೆ. ಹಿರಿಯ ಬಂಟನಿಗೆ ಮೊದಲು ಹಾಲಿನ ಅಭಿಷೇಕ ಮಾಡಲಾಗುತ್ತದೆ. ನಂತರ ಅರ್ಚಕರು ದೇವರಿಗೆ ಆಭರಣ ತೊಡಿಸಿ ಪೂಜೆಗೆ ಸಿದ್ದಪಡಿಸುತ್ತಾರೆ. ಹೊರಭಾಗದಲ್ಲಿ ದೇವಾಲಯದ ಮುಖ್ಯಸ್ಥರು ಭಕ್ತರು ದೇವರಿಗೆ ತಂದಿರುವ ವೀಳ್ಯದೆಲೆ, ಅಡಿಕೆ ಸ್ವೀಕರಿಸುತ್ತಾರೆ. ನಂತರ ತೆಂಗಿನಕಾಯಿ ಒಡೆಯಲಾಗುತ್ತದೆ.

 ಅಮದಳ್ಳಿ ಗ್ರಾಮದ ಆರಾಧ್ಯ ದೇವನಾಗಿರುವ ಬಂಟದೇವ ನೂರಾರು ವರ್ಷಗಳಿಂದ ನಿಸರ್ಗ ಸೌಂದರ್ಯದ ಮಡಿಲಲ್ಲಿ ನೆಲೆ ನಿಂತಿದ್ದಾನೆ. ಪ್ರತಿ ಸೋಮವಾರ ದೇವಾಲಯದಲ್ಲಿ ವಿಶೇಷ ಪೂಜೆ ನಡೆಸಲಾಗುತ್ತದೆ.  ಭಕ್ತರು ವಿಶೇಷವಾಗಿ ಹಣ್ಣು ಕಾಯಿಯ ಜೊತೆಗೆ ವೀಳ್ಯದೆಲೆ ಮತ್ತು ಅಡಿಕೆ ನೀಡುವ ಪದ್ಧತಿ ಅನೂಚಾನವಾಗಿ ನಡೆದು ಬಂದಿದೆ.  ಭಕ್ತರು ನಿಯಮದಂತೆ ಹಿರೆ ಬಂಟನಿಗೆ ಮೂರು ಕಟ್ಟು ವೀಳ್ಯದೆಲೆ ಹಾಗೂ 30 ಅಡಿಕೆ(ARECNUT) ನೀಡುತ್ತಾರೆ.  ತುಂಬಾ ಶಕ್ತಿ ಸ್ಥಳವಾಗಿರುವ ಬಂಟ ದೇವಾಲಯದಲ್ಲಿ ಬೇಡಿದ್ದೆಲ್ಲಾ ನೆರವೇರಿಸುತ್ತಾನೆಂಬ ನಂಬಿಕೆ  ಭಕ್ತರಲ್ಲಿದೆ.

ಅಮದಳ್ಳಿಯ ಶ್ರೀ ಬಂಟದೇವ ಗ್ರಾಮದ ದೇವರಾದರೂ ಸಹ ಪರವೂರಿನ ಭಕ್ತರು ಸಾಕಷ್ಟು ಸಂಖ್ಯೆಯಲ್ಲಿ ನಂಬಿದ್ದಾರೆ.  ತಮ್ಮ ಜೀವನದಲ್ಲಿ ಎದುರಾಗುವ ಕಷ್ಟ ಕಾರ್ಪಣ್ಯಗಳ ಬಗ್ಗೆ ಭಕ್ತರು ದೇವರಲ್ಲಿ ಬೇಡಿಕೊಳ್ತಾರೆ. ಉದ್ಯೋಗ ವ್ಯವಹಾರಗಳು, ಸಂತಾನ ಸಮಸ್ಯೆ,  ವಿವಾಹ ಕಾರ್ಯಗಳು ಸೇರಿ ಹತ್ತು ಹಲವು ವಿಷಯಗಳಿಗಾಗಿ ದೇವರಲ್ಲಿ ಅಪ್ಪಣೆ ಕೇಳುವ ಪದ್ದತಿ ಇದೆ. ಹೀಗಾಗಿ ಇಲ್ಲಿ ಪುಡಿ ಪ್ರಸಾದ ಕಟ್ಟುತ್ತಾರೆ. ದೇವರ ಹುಕುಂ ಪಡೆದ ಬಳಿಕವೇ ಮುಂದಿನ ಕೆಲಸಕ್ಕೆ ಅಣಿಯಾಗುತ್ತಾರೆ. ಭಕ್ತರ ಬೇಡಿಕೆಗಳನ್ನ ಬಂಟದೇವ ನೆರವೇರಿಸಿದ ಸಾಕಷ್ಟು ಉದಾಹರಣೆಗಳಿವೆ ಎಂದು ಭಕ್ತರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ವಾರದ ಪ್ರತಿ ಸೋಮವಾರ(MONDAY) ಇಲ್ಲಿ ಪೂಜೆ ನೆರವೇರಿದರೂ ಕೂಡ  ಶ್ರಾವಣ ಸಂದರ್ಭದಲ್ಲಿ ಭಕ್ತರ ಸಂಖ್ಯೆ ಅಧಿಕವಾಗಿರುತ್ತೆ. ಇಲ್ಲಿ ಎರಡು ಬಂಟದೇವಾಲಯವಿದ್ದು, ಮೊದಲು ಹಿರೆ ಬಂಟನಿಗೆ ಸೇವೆ ಸಲ್ಲಿಸಿದ ಬಳಿಕ ಕೆಳಗಡೆಯ ಕಿರಿಯ ಬಂಟನಿಗೆ ಪೂಜೆ ಸಲ್ಲಿಸಲಾಗುತ್ತೆ. ಭಕ್ತರು ತಾಳ್ಮೆಯಿಂದ ಶ್ರದ್ದೆಯಿಂದ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ.

ಬಂಟದೇವ ಶಿವ ವಿಷ್ಣುವಿನ ಪ್ರತಿ ರೂಪವೆಂದು ಹೇಳಲಾಗುತ್ತದೆ. ಹೀಗಾಗಿ  ಕುಳಾವಿಗಳು, ಭಕ್ತರು ಸೇರಿ ಪರವೂರಿನ ಭಕ್ತರು ಇಲ್ಲಿಗೆ ಬಂದು ಬಂಟದೇವರಿಗೆ ಪೂಜೆ ಸಲ್ಲಿಸುತ್ತಾರೆ. ಎಲ್ಲವೂ ದೈವೆಚ್ಛೆಯಂತೆ ನಡೆಯುತ್ತಿದೆ. ದೇವಾಲಯದ ಅರ್ಚಕರು, ಮುಖ್ಯಸ್ಥರು ಶ್ರಾವಣದ ಸೋಮವಾರ ಭಕ್ತರಿಗೆ ಅನುಕೂಲವಾಗುವಂತೆ ಪೂಜಾ ಕೈಕಂಕರ್ಯ ನಡೆಸಿಕೊಂಡು ಬರುತ್ತಿದ್ದಾರೆ. ಕೊನೆಯಲ್ಲಿ ಮಳಿ ಪ್ರಸಾದ ಇಲ್ಲಿ ವಿಶೇಷವಾಗಿದ್ದು  ಪ್ರತಿ ಭಕ್ತರು ಮನೆಗೆ ಕೊಂಡೊಯ್ಯುತ್ತಾರೆ. ಬಂಟದೇವ ಗಡಿಯಲ್ಲಿ ನಿಂತು ಕಾಯುತ್ತಿದ್ದಾನೆ. ಸಾಧ್ಯವಾದರೆ ನೀವು ಒಮ್ಮೆ ಶ್ರಾವಣ ಸೋಮವಾರದಂದು ಭೇಟಿ ನೀಡಿ.