ಇ ಸಮಾಚಾರ ಡಿಜಿಟಲ್ನ್ಯೂಸ್ (esamachara digital news) ಗೋಕರ್ಣ (Gokarn) : ಉತ್ತರಕನ್ನಡ ಜಿಲ್ಲೆಯ ಗೋಕರ್ಣದ ಮುಖ್ಯ ಕಡಲತೀರದಲ್ಲಿ(Gokarn Main Beach) ಸಮುದ್ರದ ನೀರಿನ ಸೆಳೆತಕ್ಕೆ ಸಿಲುಕಿದ್ದ ಚಿತ್ರದುರ್ಗ ಮೂಲದ ಮೂವರು ಪ್ರವಾಸಿಗರನ್ನು ಕರ್ತವ್ಯ ನಿರತ ಜೀವ ರಕ್ಷಕ ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ರಕ್ಷಣೆ(Rescue) ಮಾಡಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಮನು (23), ಶಿವು (36) ಹಾಗೂ ಕಿರಣ್ (26) ರಕ್ಷಿಸಲ್ಪಟ್ಟ ಪ್ರವಾಸಿಗರು. ಚಿತ್ರದುರ್ಗದಿಂದ(Chitradurga) ಒಟ್ಟು 21 ಮಂದಿ ಸ್ನೇಹಿತರ ತಂಡ ಗೋಕರ್ಣಕ್ಕೆ(Gokarn) ಪ್ರವಾಸಕ್ಕೆ ಆಗಮಿಸಿತ್ತು. ಈ ವೇಳೆ ಆರು ಮಂದಿ ಸಮುದ್ರದಲ್ಲಿ ಈಜಾಡುತ್ತಿದ್ದಾಗ ಅಚಾನಕ್ ನೀರಿನ ಸೆಳೆತಕ್ಕೆ ಸಿಲುಕಿ ಸಮುದ್ರದಲ್ಲಿ ಕೊಚ್ಚಿ ಹೋಗುವ ಪರಿಸ್ಥಿತಿ ಎದುರಾಯಿತು.

ಪ್ರವಾಸಿಗರು ಅಪಾಯದಲ್ಲಿರುವುದನ್ನು ಗಮನಿಸಿದ ಕರ್ತವ್ಯ ನಿರತ ಜೀವ ರಕ್ಷಕ ಸಿಬ್ಬಂದಿಗಳು ಯಾವುದೇ ತಡವಿಲ್ಲದೆ ತಕ್ಷಣವೇ ಸಮುದ್ರಕ್ಕೆ ಧುಮುಕಿ ಮೂವರು ಪ್ರವಾಸಿಗರನ್ನು ಸುರಕ್ಷಿತವಾಗಿ ಹೊರತಂದರು. ಬೀಚ್‌ನಲ್ಲಿ ಈಜಾಟಕ್ಕೆ ಮುನ್ನ ಎಚ್ಚರಿಕೆ(Warning) ನೀಡಿದ್ದರೂ ಅದನ್ನು ನಿರ್ಲಕ್ಷಿಸಿ ನೀರಿಗೆ ಇಳಿದ ಪರಿಣಾಮ ಈ ಘಟನೆ ನಡೆದಿದೆ ಎನ್ನಲಾಗಿದೆ.

ಲೋಕೇಶ್ ಹರಿಕಂತ್ರ, ಶಿವಪ್ರಸಾದ್ ಅಂಬಿಗ, ರೋಷನ್ ಖಾರ್ವಿ ಹಾಗೂ ಮೋಹನ ಅಂಬಿಗ ಎಂಬ ಜೀವ ರಕ್ಷಕ ಸಿಬ್ಬಂದಿಗಳು ಸಾಹಸಮಯ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಈ ವೇಳೆ ಬೀಚ್ ಸೂಪರ್ವೈಸರ್ ರವಿ ನಾಯ್ಕ್, ಪ್ರವಾಸಿ ಮಿತ್ರ ಶೇಖರ್ ಹರಿಕಂತ್ರ ಹಾಗೂ ಗೋಕರ್ಣ ಮೇನ್ ಬೀಚ್ ವಾಟರ್ ಸ್ಪೋರ್ಟ್ಸ್ ಸಿಬ್ಬಂದಿ ದೀಪಕ್ ಗೌಡ ಅವರು ಸಹಕಾರ ನೀಡಿದರು.

ಘಟನೆ ಗೋಕರ್ಣ ಪೊಲೀಸ್ ಠಾಣಾ(Gokarn Police Station) ವ್ಯಾಪ್ತಿಯಲ್ಲಿ ನಡೆದಿದೆ. ಸಮಯಕ್ಕೆ ಸರಿಯಾಗಿ ಜೀವ ರಕ್ಷಕ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ ಕಾರಣ ದೊಡ್ಡ ಅನಾಹುತ ತಪ್ಪಿದಂತಾಗಿದೆ.

ಇದನ್ನು ಓದಿ : ಬಿಣಗಾ ರಾ. ಹೆದ್ದಾರಿಯಲ್ಲಿ ಅಪಘಾತ. ಡಿಡಿಪಿಐ ಕಚೇರಿ ‌ನೌಕರ ದುರ್ಮರಣ.