ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ಗ್ರಾಮೀಣ ಭಾಗದ ನಂಬಿಕೆಯ ಭಟ್ಕಳದ(Bhatkal) ಐತಿಹಾಸಿಕ ಹಾಗೂ ಪ್ರಸಿದ್ಧ ಮಾರಿ ಜಾತ್ರೆಯು(Mari jaatre) ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಂಪನ್ನಗೊಂಡಿತು.
.
ಎರಡು ದಿನಗಳ ಕಾಲ ಮಾರಿಕಾಂಬಾ ದೇವಸ್ಥಾನದ(Marikamba Temple) ಗದ್ದುಗೆಯಲ್ಲಿ ಪ್ರತಿಷ್ಠಾಪನೆಗೊಂಡಿದ್ದ ಮಾರಿಯಮ್ಮನಿಗೆ ವಿಶೇಷ ಪೂಜೆ, ನೈವೇದ್ಯ ಹಾಗೂ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಗುರುವಾರ ಮುಂಜಾನೆಯಿಂದಲೇ ತಾಲೂಕು ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಿಂದ ಆಗಮಿಸಿದ್ದ ಭಕ್ತರು ಕಿಲೋಮೀಟರ್‌ಗಟ್ಟಲೆ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದು ಹಣ್ಣು-ಕಾಯಿ ಸಮರ್ಪಿಸಿ ಪ್ರಾರ್ಥಿಸಿದರು.

ಎರಡನೇ ದಿನ ಊರಿನವರು ಮಾರಿ ಹಬ್ಬ(Mari Festival) ಆಚರಿಸುವ ಸಂಪ್ರದಾಯದಂತೆ ತಾಲೂಕಿನ ವಿವಿಧ ಗ್ರಾಮಗಳ ಜನರು ತಮ್ಮ ಮನೆಗಳಲ್ಲಿ ಮಾರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಗುರುವಾರ ಸಂಜೆ ಸುಮಾರು 4.30ಕ್ಕೆ ದೇವಸ್ಥಾನದಲ್ಲಿ ಮಹಾಮಂಗಳಾರತಿ ಹಾಗೂ ವಿಸರ್ಜನಾ ಪೂಜೆ ನೆರವೇರಿದ ಬಳಿಕ, ಮಾರಿ ದೇವಿಯ ಮೂರ್ತಿಯನ್ನು ಗದ್ದುಗೆಯಿಂದ ಇಳಿಸಿ ಭಕ್ತರು ತಲೆಯ ಮೇಲೆ ಹೊತ್ತು ಜಯಘೋಷಗಳ ನಡುವೆ ಭವ್ಯ ಮೆರವಣಿಗೆಯಲ್ಲಿ ಸಾಗಿಸಿದರು. ಪೇಟೆ ಮುಖ್ಯರಸ್ತೆ(Pete Main Road), ಬಂದರು ರಸ್ತೆ(Bunder Road), ಹನುಮಾನನಗರ(Hanuman Nagar) ಹಾಗೂ ಕರಿಕಲ್(Karikal) ಮಾರ್ಗವಾಗಿ ಮೆರವಣಿಗೆ ಜಾಲಿಕೋಡಿ(Jalikodi Beach) ಸಮುದ್ರ ತೀರ ತಲುಪಿತು.
ಮೆರವಣಿಗೆ ಸಾಗಿದ ಮಾರ್ಗದುದ್ದಕ್ಕೂ ಭಕ್ತರು ರಸ್ತೆ ಬದಿಯಲ್ಲಿ ನಿಂತು ರೋಗ-ರುಜಿನಗಳು ದೂರವಾಗಲೆಂದು ದೇವಿಯಲ್ಲಿ ಪ್ರಾರ್ಥಿಸಿದರು. ದೇವಿಯ ಹೂವಿನ ಪ್ರಸಾದವನ್ನು ಭಕ್ತರು ಭಕ್ತಿಭಾವದಿಂದ ಸ್ವೀಕರಿಸಿದರು.

ಸಂಜೆ ಜಾಲಿಕೋಡಿ ಸಮುದ್ರ ತೀರ ತಲುಪಿದ ಮಾರಿ ದೇವಿಯ ಮೂರ್ತಿಯನ್ನು ದೇವಸ್ಥಾನದ ಆಡಳಿತ ಮಂಡಳಿ, ಸ್ವಯಂಸೇವಕರು ಹಾಗೂ ಭಕ್ತರ ಸಮ್ಮುಖದಲ್ಲಿ ವಿಧಿವಿಧಾನಗಳೊಂದಿಗೆ ಬೇರ್ಪಡಿಸಿ ಸಮುದ್ರದಲ್ಲಿ ಜಲಸ್ತಂಭನಗೊಳಿಸಲಾಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷ ಶ್ರೀಪಾದ ಕಂಚುಗಾರ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್.ಹೆಚ್ಚುವರಿ ಎಸ್‌ಪಿ ಜಿ. ಕೃಷ್ಣಮೂರ್ತಿ, ಡಿವೈಎಸ್‌ಪಿ ಬಿ. ಗಿರೀಶ್, ನಗರ ಠಾಣೆ ಸಿಪಿಐ ದಿವಾಕರ ಪಿ.ಎಂ,ಗ್ರಾಮೀಣ ಠಾಣೆ ಸಿಪಿಐ ವೆಂಕಟೇಶ್ ಎಸ್. ಮುರ್ನಾಲ್, ಮುರುಡೇಶ್ವರ ವಲಯ ಸಿಪಿಐ ಜಗದೀಶ ಹಂಚಿನಾಳ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ ಕಲ್ಪಿಸಲಾಗಿತ್ತು. ಅಗ್ನಿಶಾಮಕ ದಳ, ಕರಾವಳಿ ಭದ್ರತಾ ಪಡೆ, ಶ್ವಾನದಳ ಹಾಗೂ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸಿಬ್ಬಂದಿ ಸೇವೆ ಸಲ್ಲಿಸಿದರು.

ವಿಸರ್ಜನೆಗೆ ಬಂದಂತ ಭಕ್ತಾದಿಗಳು ಪುನಃ ಬರಲು ಟೆಂಪೋ ಚಾಲಕರು ಸಂಘ ದಿಂದ ಉಚಿತವಾಗಿ ಟೆಂಪೋ ವ್ಯವಸ್ಥೆ ಕಲ್ಪಿಸಿದ್ದರು.