ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಕಾರವಾರ(Karwar) : ನಗರದ ಬಾಡದ ಚಂದ್ರಾದೇವಿ ಕ್ರಿಕೆಟ್ ಮೈದಾನದಲ್ಲಿ(Chandradevi Cricket Ground ) ಮಾರ್ಚ್ 25 ರಿಂದ 29ರ ವರೆಗೆ ‘ಪಡ್ತಿ ಸಮಾಜ ಪ್ರೀಮಿಯರ್ ಲೀಗ್’ (PPL) ಸೀಸನ್-3ರ ಕ್ರಿಕೆಟ್ ಪಂದ್ಯಾವಳಿಯನ್ನು ಅದ್ದೂರಿಯಾಗಿ ಆಯೋಜಿಸಲಾಗಿದೆ.

ಪಡ್ತಿ ಸಮಾಜ ಪ್ರೀಮಿಯರ್ ಲೀಗ್ ಸಮಿತಿ(Padti Premier League Committee) ಹಾಗೂ ಸಹ-ಆಯೋಜಕರಾದ ಚಂದ್ರಾದೇವಿ ಸ್ಪೋರ್ಟ್ಸ್ ಕ್ಲಬ್(Chandradevi Sports Club) ಮತ್ತು ಎನ್.ಬಿ.ಸಿ  ಸ್ಪೋರ್ಟ್ಸ್ ಕ್ಲಬ್(NBC Sports Club) ಹಿರೇಶಿಟ್ಟಾ ಇವರ ಜಂಟಿ ಆಶ್ರಯದಲ್ಲಿ ಈ ಟೂರ್ನಿ ನಡೆಯಲಿದ್ದು, ಮಾರ್ಚ್ 25 ರಂದು ಬೆಳಿಗ್ಗೆ 9:15ಕ್ಕೆ ಮಾಜಿ ಶಾಸಕಿ ರೂಪಾಲಿ ನಾಯ್ಕ(Roopali Naik) ಅವರು ಈ ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ ಎಂದು ಆಯೋಜಕ ಸಮಿತಿಯ ಅಧ್ಯಕ್ಷ ಸತೀಶ್ ತಳೇಕರ್ ತಿಳಿಸಿದರು.

ನಗರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಿಂದ 6 ತಂಡಗಳೊಂದಿಗೆ ಯಶಸ್ವಿಯಾಗಿ ನಡೆಯುತ್ತಿದ್ದ ಈ ಪಂದ್ಯಾವಳಿಯಲ್ಲಿ ಈ ಬಾರಿ ಒಟ್ಟು 10 ತಂಡಗಳು ಸೆಣಸಾಡಲಿವೆ. ಮಾರ್ಚ್ 1 ರಂದು ನಡೆದ ಐಪಿಎಲ್ ಮಾದರಿ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಸುಮಾರು 225 ಆಟಗಾರರು ಭಾಗವಹಿಸಿದ್ದರು. ಪ್ರತಿ ತಂಡಕ್ಕೆ ಇಬ್ಬರು ಐಕಾನ್ ಪ್ಲೇಯರ್ಸ್(Icon Players) ಸೇರಿದಂತೆ ಒಟ್ಟು 15 ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇದರಲ್ಲಿ ಅನಿಲ್ ಗಾಂವಕರ, ಮಹೇಶ ಗಾಂವಕರ, ಅಮಿತ್ ತಳೇಕರ್ ಹಾಗೂ ಸಂದೀಪ ಕಂತ್ರೇಕರ್ ಅತೀ ಹೆಚ್ಚು ಮೊತ್ತಕ್ಕೆ ಅಂದರೆ 13,500 ರೂ.ಗೆ  ಹರಾಜಾಗಿದ್ದಾರೆ ಎಂದರು.

ಅಮ್ಚೆ ಸೂಪರ್ ಕಿಂಗ್ಸ್ ಅಮದಳ್ಳಿ(Amche Super Kings Amadalli), ಅಸ್ನೋಟಿ ಟೈಗರ್ಸ್ ಅಸ್ನೋಟಿ(Asnoti  Tigers Asnoti), ಚಂದ್ರಾದೇವಿ ಟೈಗರ್ಸ್ ಬಾಡ(Chandradevi Tigers Baad), ಚೆಂಡಿಯಾ ಚಾಲೆಂಜರ್ಸ್ ಚೆಂಡಿಯಾ(Chendia Challengers Chendia), ಎನ್.ಬಿ.ಸಿ ಹಿರೇಶಿಟ್ಟಾ(NBC Hireshitta), ಓಂ ಸಾಯಿ ಹಳಗೇಜೂಗ್(Om Sai Halgejoog), ರಾಮ ಬೇತಾಳ ವಾರಿಯರ್ಸ್ ಮಾಜಾಳಿ(Ram Betal Warriors Majali), ರಾಮಸಾಥಿ ಚಾಂಪಿಯನ್ ಬ್ಲಾಸ್ಟರ್ಸ್ ಮಕೇರಿ(Ramasathi Champion Blasters Makeri), ಸೂಪರ್ ಸ್ಟ್ರೈಕರ್ಸ್ ಪೂಜಗೇರಿ(Super Strikers Poojageri) ಅಂಕೋಲಾ ಹಾಗೂ ಯಂಗ್ ಚಾಣಕ್ಯ ಕಡವಾಡ(Young Chanakya) ತಂಡಗಳು ಈ ಬಾರಿಯ ಟೂರ್ನಿಯಲ್ಲಿ ಪ್ರಶಸ್ತಿಗಾಗಿ ಕಾದಾಡಲಿವೆ ಎಂದು ತಿಳಿಸಿದರು.

ಬಳಿಕ ಬಹುಮಾನದ ಕುರಿತು ಮಾಹಿತಿ ನೀಡಿದ ಸದಸ್ಯ ನರೇಂದ್ರ ತಳೇಕರ್, ವಿಜೇತ ಪ್ರಥಮ ತಂಡಕ್ಕೆ 2 ಲಕ್ಷ ರೂ. ನಗದು ಹಾಗೂ ಟ್ರೋಫಿ, ದ್ವಿತೀಯ ಸ್ಥಾನಿಗಳಿಗೆ 1 ಲಕ್ಷ ರೂ. ಹಾಗೂ ಟ್ರೋಫಿ ಮತ್ತು ತೃತೀಯ ಸ್ಥಾನ ಪಡೆಯುವ ತಂಡಕ್ಕೆ 50 ಸಾವಿರ ರೂ. ಮತ್ತು ಟ್ರೋಫಿಗಳನ್ನು ಬಹುಮಾನವಾಗಿ ನೀಡಲಾಗುವುದು. ಇದರ ಜೊತೆಗೆ ಅತ್ಯುತ್ತಮ ಬೌಲರ್, ಅತ್ಯುತ್ತಮ ಬ್ಯಾಟ್ಸ್ಮನ್ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಗಳನ್ನು ಸಹ ಪ್ರದಾನ ಮಾಡಲಾಗುವುದು. ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರು ಸೀಸನ್ 1 ರಿಂದಲೂ ಈ ಟೂರ್ನಿಗೆ ನಿರಂತರ ಬೆಂಬಲ ಹಾಗೂ ಸಹಕಾರ ನೀಡುತ್ತಾ ಬಂದಿದ್ದಾರೆ ಎಂದು ತಿಳಿಸಿದ ಅವರು, ಕ್ರಿಕೆಟ್ ಪ್ರೇಮಿಗಳಿಗಾಗಿ ಈ ರೋಚಕ ಪಂದ್ಯಾವಳಿಯ ನೇರಪ್ರಸಾರ ರಾಜ್ಯಾದ್ಯಂತ ಲಭ್ಯವಿರಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ತಂಡದ ಮಾಲೀಕರು ಹಾಗೂ ಐಕಾನ್ ಆಟಗಾರರ ಸಮ್ಮುಖದಲ್ಲಿ ಟೂರ್ನಿಯ ತಂಡಗಳ ಜೆರ್ಸಿಯನ್ನು ಅನಾವರಣಗೊಳಿಸಲಾಯಿತು. ಸಮಾಜದ ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪಂದ್ಯಾವಳಿಯನ್ನು ಯಶಸ್ವಿಗೊಳಿಸುವಂತೆ ಆಯೋಜಕರು ವಿನಂತಿಸಿದ್ದಾರೆ.

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಮೋಹನ್ ಕೊಚರೇಕರ್, ಪ್ರದೀಪ ಗೋವೇಕರ್, ಕಾರ್ಯದರ್ಶಿ ಉಲ್ಲಾಸ್ ನಾಗೇಕರ್ ಹಾಗೂ ಪ್ರಮುಖರಾದ ಪ್ರಶಾಂತ ತಳೇಕರ್, ನರೇಂದ್ರ ತಳೇಕರ್, ಸಂತೋಷ ಟಕ್ಕರಕರ್, ಗಿರೀಶ ಕೊಠಾರಕರ್, ಸಂತೋಷ ಪಂಜುಲೇಕರ್ ಮತ್ತು ಉಲ್ಲಾಸ್ ತಳೇಕರ್ ಮುಂತಾದವರು ಉಪಸ್ಥಿತರಿದ್ದರು.