ಕಾರವಾರ: ತಾಲೂಕಿನ ಮಾಜಾಳಿಯ ಬಾವಳದಲ್ಲಿ ಕಡಲ ಕೊರೆತದಿಂದ ಸುಮಾರು 150 ಮೀಟರ್ ಉದ್ದದ ರಸ್ತೆ ಕುಸಿದು ಬಿದ್ದ ಘಟನೆ ನಡೆದಿದೆ.
ಘಟನೆಯಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ. ರಸ್ತೆ ಕುಸಿತಕ್ಕೆ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷವೇ ಕಾರಣವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ರಸ್ತೆ ಕುಸಿಯುವ ಸ್ಥಳೀಯರು ಕೆಲ ದಿನಗಳ ಹಿಂದೆ ಅಧಿಕಾರಿಗಳ ಗಮನ ಸೆಳೆದಿದ್ದರು. ಆದರೆ ಲಕ್ಷ್ಯ ವಹಿಸದೇ ಇರುವುದರಿಂದ ಬಾವಳದ ರಸ್ತೆ ಕಡಲ್ಗೊರೆತಕ್ಕೆ ಆಹುತಿಯಾಗಿದೆ .
ಗುರುವಾರ ಮಳೆ ಬಿರುಸು ಹೆಚ್ಚಾಗಿದ್ದರಿಂದ ಕಡಲ ಬಾರೀ ಅಲೆಗಳು ಸಮೀಪದ ರಸ್ತೆಯಂಚಿಗೆ ಬಂದು ಅಪ್ಪಳಿಸುತ್ತಿದೆ. ಪರಿಣಾಮವಾಗಿ ರಸ್ತೆಯು ಕಡಲ ಕೊರೆತಕ್ಕೆ ನಾಶವಾಗಿದೆ. ಇದೇ ರೀತಿ ಮುಂದುವರೆದರೆ ರಸ್ತೆ ಮತ್ತೆ ಕುಸಿಯುವ ಸಾಧ್ಯತೆ ಇದೆ.
ಕಡಲ ಕೊರೆತದಿಂದ ರಸ್ತೆ ಸಂಪರ್ಕ ಕಡಿತವಾಗಿದ್ದರಿಂದ ಪ್ರತಿನಿತ್ಯ ಓಡಾಡುವ ಸರಕಾರಿ ಬಸ್ ಸಂಚಾರ ನಿಲ್ಲಲಿದೆ. ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯಾವ ರೀತಿ ಪರ್ಯಾಯ ವ್ಯವಸ್ಥೆ ಮಾಡುತ್ತಾರೆ ಕಾದು ನೋಡಬೇಕಾಗಿದೆ.