ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news): ಒರಿಸ್ಸಾ(Orissa) : ಇವತ್ತುಬ್ಯಾಂಕುಗಳಲ್ಲಿ ಸಾಮಾನ್ಯರ ಕೆಲಸ ಸರಾಗವಾಗಿ ಆಗುತ್ತಿಲ್ಲ. ಸಿಬ್ಬಂದಿಗಳ ವರ್ತನೆಯಿಂದ ಬಡ ಗ್ರಾಹಕರು(Poor Customers) ತಮ್ಮ ಖಾತೆಗಳಿಂದ  ಪಡೆಯಬೇಕಾದ ಹಣವನ್ನ ಪಡೆಯಲು‌ ಸಾಧ್ಯವಾಗುತ್ತಿಲ್ಲ. ಇದಕ್ಕೆ ಸ್ಪಷ್ಟ ಉದಾಹರಣೆಯೊಂದು ಸಿಕ್ಕಿದೆ ನೋಡಿ.

ಬ್ಯಾಂಕಿಂಗ್ ವ್ಯವಸ್ಥೆಯ(Banking System)  ಕಠಿಣ ನಿಯಮಗಳಿಂದಾಗಿ  ಬಡವನೋರ್ವ ನೋವು ಅನುಭವಿಸಿದ  ಮನಕಲುಕುವ ಘಟನೆ ಒಡಿಶಾದ ಕಿಯೋಂಝಾರ್(Odissa Kiyonzar) ಜಿಲ್ಲೆಯಲ್ಲಿ ನಡೆದಿದೆ.

ಜಿತು ಮುಂಡಾ(Jeetu Munda) ಎಂಬ ವ್ಯಕ್ತಿ ತನ್ನ ಮೃತ ಸಹೋದರಿ ಕಾಕ್ರಾ ಮುಂಡಾ ಅವರ ಅಸ್ಥಿಪಂಜರವನ್ನು(Skeleton) ಭುಜದ ಮೇಲೆ ಹೊತ್ತುಕೊಂಡು, ಸುಡುವ ಬಿಸಿಲಿನಲ್ಲಿ ಮೂರು ಕಿಲೋಮೀಟ‌ರ್ ನಡೆದು ಬ್ಯಾಂಕ್‌ಗೆ ಧಾವಿಸಿರುವ  ಘಟನೆ  ಆಘಾತ ಮೂಡಿಸುವಂತಾಗಿದೆ.

ಜಿತು ಮುಂಡಾ ಅವರ ಸಹೋದರಿ ಕಾಕ್ರಾ ಮುಂಡಾ ಮಲ್ಲಿಪಾಸಿಯ ಒಡಿಶಾ ಗ್ರಾಮೀಣ ಬ್ಯಾಂಕಿನಲ್ಲಿ(Odissa Rural Bank) ಖಾತೆ ಹೊಂದಿದ್ದರು. ಎರಡು ತಿಂಗಳ ಹಿಂದೆ ಕಾಕ್ರಾ ನಿಧನರಾಗಿದ್ದು, ಅವರ ಪತಿ ಹಾಗೂ ಇದ್ದ ಏಕೈಕ ಮಗು ಮೊದಲೇ ಮೃತಪಟ್ಟಿದ್ದರು. ಹೀಗಾಗಿ ಜಿತು ಮಾತ್ರ ಆಕೆಯ ಏಕೈಕ ಜೀವಿತ ಸಂಬಂಧಿಯಾಗಿದ್ದರು.

ಸಹೋದರಿಯ ಖಾತೆಯಲ್ಲಿ ಉಳಿದಿದ್ದ ಕೇವಲ 19,300 ರೂ. ಹಣವನ್ನು ಹಿಂಪಡೆಯಲು ಜಿತು ಬ್ಯಾಂಕ್ ಸಂಪರ್ಕಿಸಿದಾಗ, ಖಾತೆದಾರರು ಸ್ವತಃ ಹಾಜರಾಗಬೇಕು ಅಥವಾ ಕಾನೂನುಬದ್ಧ ಉತ್ತರಾಧಿಕಾರಿ ದಾಖಲೆಗಳನ್ನು ಸಲ್ಲಿಸಬೇಕು ಎಂದು ಬ್ಯಾಂಕ್ ಮ್ಯಾನೇಜರ್(Bank Manager) ತಿಳಿಸಿ, ಹಣ ಕೊಡಲು  ನಿರಾಕರಿಸಿದ್ದಾರೆ.

ಯಾವುದೇ ವಿದ್ಯೆ ಪಡೆಯದ  ಬುಡಕಟ್ಟು ಸಮುದಾಯದ(Tribal Community) ಜಿತು, ಮರಣ ಪ್ರಮಾಣಪತ್ರ ಅಥವಾ ಉತ್ತರಾಧಿಕಾರ ದಾಖಲೆಗಳ ಅರಿವು ಇಲ್ಲದೆ, ಪ್ರಕ್ರಿಯೆಯ ಸಂಕೀರ್ಣತೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದೆ ನಿರಾಶೆಯಿಂದ ಹಿಂತಿರುಗಿದ್ದರು‌. ಹಣದ ಅವಶ್ಯಕತೆ ಇದ್ದಿದರಿಂದ  ಗ್ರಾಮದ ಸ್ಮಶಾನಕ್ಕೆ ತೆರಳಿ ಸಹೋದರಿಯ ಸಮಾಧಿಯನ್ನು ಅಗೆದು, ಅಸ್ಥಿಪಂಜರವನ್ನು ಹೊರತೆಗೆದು ಬಟ್ಟೆಯಲ್ಲಿ ಸುತ್ತಿಕೊಂಡರು. ಬಳಿಕ ಉರಿಯುತ್ತಿರುವ ಬಿಸಿಲಿನಲ್ಲಿ 3ಕಿಲೋಮೀಟರ್ ದೂರದವರೆಗೆ  ನಡೆದು ಬ್ಯಾಂಕ್ ಗೆ ಬಂದಿದ್ದಾರೆ.

ಬ್ಯಾಂಕ್ ಗೆ  ಅಸ್ಥಿಪಂಜರ(Skeleton) ಹೊತ್ತು ಬಂದ ದೃಶ್ಯ ಕಂಡ ಸ್ಥಳೀಯರು ಹೌಹಾರಿದ್ದಾರೆ. ಕೆಲವರು ದುಃಖ ವ್ಯಕ್ತಪಡಿಸಿದರೆ  ಇನ್ನು ಕೆಲವರು ಬ್ಯಾಂಕ್(Bank) ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಬಡವನೊಬ್ಬ ತನ್ನದೇ ಹಣವನ್ನು ಪಡೆಯಲು ಇಷ್ಟು ಕಷ್ಟ ಅನುಭವಿಸಬೇಕೇ?” ಎಂದು ಗ್ರಾಹಕರು ಪ್ರಶ್ನಿಸಿದ್ದಾರೆ.

ಬ್ಯಾಂಕ್ ಅಧಿಕಾರಿಗಳು(Bank Officers) ಗ್ರಾಮ ಪಂಚಾಯತ್(Village Panchayat) ಮೂಲಕ ಆಕೆಯ ಸಾವಿನ ಬಗ್ಗೆ ಪರಿಶೀಲನೆ ನಡೆಸಬಹುದಿತ್ತು ಅಥವಾ ಸ್ಥಳೀಯ ಮಟ್ಟದಲ್ಲಿ ದೃಢೀಕರಣ ಮಾಡಬಹುದಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ವಿಷಯ  ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಜಿತು ಅವರನ್ನು ಸಮಾಧಾನಪಡಿಸಿದರು. ಪ್ರಕರಣವನ್ನು ಮಾನವೀಯ ದೃಷ್ಟಿಯಿಂದ ಪರಿಗಣಿಸಲಾಗುವುದು ಹಾಗೂ ಬ್ಯಾಂಕ್‌ನಿಂದ ಈ ಸಂಬಂಧ  ಸ್ಪಷ್ಟನೆ ಕೇಳಲು  ಪೊಲೀಸರು ಮುಂದಾಗಿದ್ದಾರೆ.

ಇದನ್ನು ಓದಿ : ಮೋರಿಯ ಕೆಳಗೆ ಬಿದ್ದ ಬೈಕ್‌.  ಸವಾರ ಸ್ಥಳದಲ್ಲೇ ಸಾವು, ತಾಯಿ-ಮಗು ಪಾರು