ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆಯುಂಟು ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಭಟ್ಕಳ(Bhatkal) ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಯುವಕನೋರ್ವನನ್ನ ಉತ್ತರಕನ್ನಡ(Uttarkannada) ಜಿಲ್ಲೆಯಿಂದ ಮೈಸೂರು(Mysore) ನಗರದ ಅಶೋಕಪುರಂ ಪೊಲೀಸ್ ಠಾಣೆ ವ್ಯಾಪ್ತಿಗೆ ಆರು ತಿಂಗಳ ಕಾಲ ಗಡಿಪಾರು ಮಾಡಿ ಆದೇಶಿಸಲಾಗಿದೆ.

ಹೆಬಳೆ ಗಾಂಧಿನಗರ(Heble Gandhinagar) ನಿವಾಸಿ ಜಗದೀಶ ತಂದೆ ವಾಸು ಮೊಗೇರ (33) ಎಂಬಾತನ ವಿರುದ್ಧ ಭಟ್ಕಳ(Bhatkal) ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಬಲವಂತ, ಹಲ್ಲೆ, ಕೊಲೆ ಯತ್ನ ಹಾಗೂ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಐದು ಪ್ರಕರಣಗಳು ಮತ್ತು ಮುರ್ಡೇಶ್ವರ(Murdeshwar) ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ಸೇರಿದಂತೆ ಒಟ್ಟು ಆರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದೆ.

ಎಲ್ಲ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿವೆ. ಆರೋಪಿ ತನ್ನ ಸಹಚರರೊಂದಿಗೆ ಗೂಂಡಾ ಚಟುವಟಿಕೆಗಳಲ್ಲಿ ತೊಡಗುವುದು, ಸಾರ್ವಜನಿಕರಿಗೆ ಬೆದರಿಕೆ ಹಾಕುವುದು, ಕ್ಷುಲ್ಲಕ ವಿಚಾರಗಳಿಗೂ ಹಲ್ಲೆ ನಡೆಸುವುದು ಹಾಗೂ ಪ್ರಕರಣಗಳ ಸಾಕ್ಷಿದಾರರಿಗೆ ಬೆದರಿಕೆ ಒಡ್ಡುವ ಮೂಲಕ ಸಾರ್ವಜನಿಕ ಶಾಂತಿ ಮತ್ತು ಸುರಕ್ಷತೆಗೆ ಧಕ್ಕೆಯುಂಟು ಮಾಡುತ್ತಿದ್ದಾನೆ ಎಂದು ಪೊಲೀಸ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಭಟ್ಕಳ(Bhatkal) ಗ್ರಾಮೀಣ ಠಾಣೆಯ ಪೊಲೀಸ್ ನಿರೀಕ್ಷಕರು ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ ಹಾಗೂ ಉತ್ತರ ಕನ್ನಡ(Uttarkannada) ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಗಡಿಪಾರು ಪ್ರಸ್ತಾವನೆ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಬಳಿಕ ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 55(ಎ)(ಬಿ) ಅಡಿಯಲ್ಲಿ ಜಗದೀಶ ಮೊಗೇರನನ್ನು ತಕ್ಷಣದಿಂದ ಜಾರಿಗೆ ಬರುವಂತೆ ಆರು ತಿಂಗಳ ಕಾಲ ಉತ್ತರ ಕನ್ನಡ ಜಿಲ್ಲೆಯಿಂದ ಮೈಸೂರು ನಗರದ ಅಶೋಕಪುರಂ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡುವಂತೆ ಆದೇಶಿಸಲಾಗಿದೆ.

ಆದೇಶದಂತೆ ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸರು ಜಗದೀಶ ಮೊಗೇರನನ್ನು ಮೈಸೂರು ನಗರದ ಅಶೋಕಪುರಂ ಪೊಲೀಸ್ ಠಾಣೆಯ ಅಧಿಕಾರಿಗಳ ಮುಂದೆ ಹಾಜರುಪಡಿಸಿದ್ದಾರೆ.