ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಸಿದ್ದಾಪುರ (Siddapur) : ಹಾಡುಹಗಲೇ ಮನೆಗೆ ನುಗ್ಗಿ ಮಹಿಳೆಗೆ ಕತ್ತಿಯಿಂದ ಬೆದರಿಸಿ ಮಾಂಗಲ್ಯ ಸರ ದರೋಡೆ ಮಾಡಿದ್ದ ಖತರ್ನಾಕ್ ದರೋಡೆಕೋರನನ್ನು ಸಿದ್ದಾಪುರ ಪೊಲೀಸರು(Siddapur Police) ಕೇವಲ 24 ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಿದ್ದಾಪುರ ತಾಲೂಕಿನ ಕೊಂಡ್ಲಿ ಗ್ರಾಮದ(Kondli Village) ನಿವಾಸಿ, ಕೂಲಿ ಕಾರ್ಮಿಕ ಮಹೇಶ್ ಹನುಮಂತ ಮಡಿವಾಳ(23) ಬಂಧಿತ ಆರೋಪಿ. ಸೋಮವಾರ ಸಂಜೆ 4:22 ರ ಸುಮಾರಿಗೆ ಸಿದ್ದಾಪುರ ಪೊಲೀಸ್ ಠಾಣಾ(Siddapur Police Station) ವ್ಯಾಪ್ತಿಯ ಸೊರಬ ರಸ್ತೆಯ ಹಾಳದಕಟ್ಟಾದಲ್ಲಿರುವ ಪದ್ಮರಾಜ್ ವಿಲ್ಲಾದಲ್ಲಿ ಘಟನೆ ನಡೆದಿತ್ತು. ಪೂನಮ್ ಗಣಪತಿ ಶೇಟ್ ಎಂಬ ಮಹಿಳೆ ಮನೆಯಲ್ಲಿದ್ದಾಗ ಏಕಾಏಕಿ ಕತ್ತಿ ಹಿಡಿದುಕೊಂಡು ಒಳನುಗ್ಗಿದ 25-30 ವರ್ಷ ವಯಸ್ಸಿನ ಅಪರಿಚಿತ ಯುವಕ, ಆಕೆಯ ಬಳಿ ಬಂದು ಬಂಗಾರ ತೆಗೆಯುವಂತೆ ಜೀವಬೆದರಿಕೆ ಹಾಕಿದ್ದ. ಈ ವೇಳೆ ಆತಂಕಗೊಂಡ ಮಹಿಳೆ ಆತನನ್ನು ದೂಡಿ ಮನೆಯಿಂದ ಹೊರಬರಲು ಪ್ರಯತ್ನಿಸಿದ್ದಾರೆ.
ಆದರೆ, ಅಷ್ಟರಲ್ಲಾಗಲೇ ಆರೋಪಿಯು ಆಕೆಯ ಕುತ್ತಿಗೆಯಲ್ಲಿದ್ದ ಅಂದಾಜು ಮೂರು ಲಕ್ಷ ರೂಪಾಯಿ ಮೌಲ್ಯದ ಸುಮಾರು 20.5 ಗ್ರಾಂ ತೂಕದ ಬಂಗಾರದ ತಾಳಿ ಸರ(Gold Mangalya Chain) ಹಾಗೂ ಆಂಟಿಕ್ ಕ್ವಾಯಿನ್ ಪವನ್ ಕೊಂಡಿಯನ್ನು ಬಲವಂತವಾಗಿ ಕಿತ್ತುಕೊಂಡು ಪರಾರಿಯಾಗಿದ್ದ. ಈ ದರೋಡೆಯ ಯತ್ನದಲ್ಲಿ ಸಂತ್ರಸ್ತೆ ಮಹಿಳೆಯ ಕುತ್ತಿಗೆಗೂ ಗಾಯಗಳಾಗಿದ್ದವು.
ಪ್ರಕರಣದ ಬೆನ್ನತ್ತಿದ ಪೊಲೀಸ್ ತಂಡವು ಅತ್ಯಂತ ತ್ವರಿತ ಕಾರ್ಯಾಚರಣೆ ನಡೆಸಿ ಆರೋಪಿಗೆ ಹೆಡೆಮುರಿ ಕಟ್ಟಿದ್ದಾರೆ. ಕಳುವಾಗಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ಸುರಕ್ಷಿತವಾಗಿ ವಶಕ್ಕೆ ಪಡೆದಿದ್ದಾರೆ.
ವಿಚಾರಣೆ ವೇಳೆ ಆರೋಪಿಯಿಂದ ಅಂದಾಜು 2,25,000 ರೂಪಾಯಿ ಮೌಲ್ಯದ 15.2 ಗ್ರಾಂ ತೂಕದ ಚಿನ್ನದ ತಾಳಿಸರ ಮತ್ತು ಕೊಂಡಿಯನ್ನು ಪೊಲೀಸರು ಯಶಸ್ವಿಯಾಗಿ ರಿಕವರಿ ಮಾಡಿದ್ದಾರೆ. ಇದರ ಜೊತೆಗೆ, ಅಪರಾಧ ಕೃತ್ಯವೆಸಗಲು ಆರೋಪಿಯು ಬಳಸಿದ್ದ ಸುಮಾರು 45,000 ರೂಪಾಯಿ ಮೌಲ್ಯದ ಮೋಟಾರ್ ಸೈಕಲ್ ಅನ್ನು ಸಹ (KA-31, EF-2020) ಜಪ್ತಿ ಮಾಡಿಕೊಳ್ಳಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಹಿರಿಯ ಅಧಿಕಾರಿಗಳ ಪ್ರಶಂಸೆ : ಮಹಿಳೆಯರ ಸುರಕ್ಷತೆಗೆ(Women Saftey) ಸವಾಲಾಗಿದ್ದ ಈ ಸೂಕ್ಷ್ಮ ಹಾಗೂ ಗಂಭೀರ ಸ್ವರೂಪದ ದರೋಡೆ ಪ್ರಕರಣವನ್ನು ಕೇವಲ 24 ಗಂಟೆಗಳಲ್ಲಿ ಬೇಧಿಸಿದ ಅಧಿಕಾರಿಗಳ ಕಾರ್ಯವೈಖರಿಗೆ ಇಲಾಖೆಯ ಹಿರಿಯ ಅಧಿಕಾರಿಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಉತ್ತರಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ದೀಪನ್ ಎಮ್.ಎನ್., ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ ಜಿ., ಹಾಗೂ ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ ಅವರ ಸೂಕ್ತ ಮಾರ್ಗದರ್ಶನದಲ್ಲಿ ಈ ಯಶಸ್ವಿ ಕಾರ್ಯಾಚರಣೆ ನಡೆದಿದೆ.
ಸಿದ್ದಾಪುರ ಠಾಣೆಯ ಪೊಲೀಸ್ ನಿರೀಕ್ಷಕ ಜೆ.ಬಿ. ಸೀತಾರಾಮ, ಪಿಎಸ್ಐಗಳಾದ ಶಾಂತಿನಾಥ ಕೆ. ಪಾಸಾನೆ, ನಾಗಪ್ಪ ಅವರ ನೇತೃತ್ವದಲ್ಲಿ ಠಾಣೆಯ ಸಿಬ್ಬಂದಿಗಳು ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ತಾಂತ್ರಿಕ ವಿಭಾಗದ ಸಿಬ್ಬಂದಿ ಒಳಗೊಂಡ ಇಡೀ ತಂಡ ಶ್ರಮಿಸಿದೆ. ಸಾರ್ವಜನಿಕರಲ್ಲಿ ಭರವಸೆ ಮೂಡಿಸುವಂತಹ ಅತ್ಯುತ್ತಮ ಕರ್ತವ್ಯ ನಿಷ್ಠೆ ಮೆರೆದ ಪೊಲೀಸ್ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಇದನ್ನು ಓದಿ : ನಾಡಬಾಂಬ್ ಸ್ಫೋಟ ಪ್ರಕರಣ: ಆರೋಪಿ ಬಂಧನ.
