ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ನಕಲಿ ಫೇಸ್‌ಬುಕ್ (Facebook) ಖಾತೆ ತೆರೆದು ಕೋಮು ಪ್ರಚೋದಕ ಸಂದೇಶಗಳನ್ನು ಹರಡುತ್ತಿದ್ದ ಯುವಕನೋರ್ವನನ್ನು ಭಟ್ಕಳ(Bhatkal) ಪೊಲೀಸರು ಪತ್ತೆಹಚ್ಚಿದ್ದಾರೆ.
ಈಶ್ವರ ಕೃಷ್ಣ ನಾಯ್ಕ (28) ಬಂಧಿತ ಯುವಕ. ಉತ್ತರಕೊಪ್ಪ ನಿವಾಸಿಯಾಗಿದ್ದು, ವೃತ್ತಿಯಲ್ಲಿ ಶಿಲ್ಪಿ ಕೆಲಸ ಮಾಡಿಕೊಂಡಿದ್ದವ ಎನ್ನಲಾಗಿದೆ. ಸೈಬರ್ ತಂತ್ರಜ್ಞಾನದ(Cyber Technology) ನೆರವಿನಿಂದ ಯುವಕನ್ನ ಪತ್ತೆ ಮಾಡಲಾಗಿದ್ದು ಆತನ ಮೊಬೈಲ್ ಫೋನ್ ಅನ್ನು ಜಪ್ತಿ ಮಾಡಲಾಗಿದೆ.
‘ರೋಹಿತ್ ಶೆಟ್ಟಿ’ ಎಂಬ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು, ಭಟ್ಕಳದ ಮುರಿನಕಟ್ಟೆ ವಿವಾದಕ್ಕೆ ಸಂಬಂಧಿಸಿದಂತೆ ಅನ್ಯಕೋಮಿನವರ ವಿರುದ್ಧ ಪ್ರಚೋದನಕಾರಿ ಬರಹಗಳು ಹಾಗೂ ಸಂದೇಶಗಳನ್ನು ಪ್ರಕಟಿಸುತ್ತಿದ್ದ ಎನ್ನಲಾಗಿದೆ. ಇತ್ತೀಚಿನ ಬೆಳವಣಿಗೆಯ ಬಗ್ಗೆ ಸಾಮಾಜಿಕ ಜಾಲತಾಣಗಳ(Social Media) ಮೇಲೆ ಪೊಲೀಸರು ನಿರಂತರ ನಿಗಾ ವಹಿಸಿದ್ದಾರೆ. ಈ ಸಂದರ್ಭದಲ್ಲಿ ರೋಹಿತ್ ಖಾತೆಯ ಅನುಮಾನಾಸ್ಪದ ಚಟುವಟಿಕೆಗಳು ಗಮನಕ್ಕೆ ಬಂದಿದ್ದವು. ಕೂಡಲೇ ಕಾರ್ಯಾಚರಣೆಗೆ ಇಳಿದ ಪೊಲೀಸರು, ಸೈಬರ್ ತಂತ್ರಜ್ಞಾನದ ನೆರವಿನಿಂದ ಖಾತೆಯ ಮೂಲವನ್ನು ಪತ್ತೆಹಚ್ಚಿ ಆರೋಪಿಯನ್ನು ಗುರುತಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಭಟ್ಕಳ ಪೊಲೀಸರು(Bhatkal Police) ಪ್ರಕರಣದ ತನಿಖೆ ನಡೆದುತ್ತಿದ್ದು ಮೊಬೈಲ್‌ನಿಂದ ಡಿಜಿಟಲ್ ಸಾಕ್ಷ್ಯಾಧಾರಗಳನ್ನು ಕಲೆಹಾಕಿ ಪರಿಶೀಲಿಸಲಾಗುತ್ತಿದೆ. ಸದ್ಯ ಆರೋಪಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದು ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
