ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಕಾರವಾರ: ಮೀನುಗಾರ ಸಮುದಾಯದ ಹಿರಿಯ ಮುಖಂಡ, ಉತ್ತರ ಕನ್ನಡ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಮಾಜಿ ಉಪಾಧ್ಯಕ್ಷ ಕೆ.ಟಿ. ತಾಂಡೇಲ್ ಅಸ್ತಂಗತರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.

ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ. ಕಳೆದ ಕೆಲ ದಿನಗಳಿಂದ ವಯೋಸಹಜತೆಯಿಂದಾಗಿ ವಿಶ್ರಾಂತಿಯಲ್ಲಿದ್ದರು. ಕೆ.ಟಿ. ತಾಂಡೇಲ್ ಅವರು ಮೀನುಗಾರಿಕ ಫೆಡರೇಶನ್ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದರು. ಕಾರವಾರದ ಮೀನುಗಾರರ ಸಾಮಾಜಿಕ ಅಭಿವೃದ್ಧಿ ಸಂಘದ ಅಧ್ಯಕ್ಷರಾಗಿ ಜಿಲ್ಲೆಯ ಮೀನುಗಾರರ ಅಭಿವೃದ್ಧಿಗೆ ಶ್ರಮಿಸಿದ್ದರು.

ಕಾರವಾರ -ಅಂಕೋಲಾ ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಲ್ಲಿ ಮೀನುಗಾರಿಕೆ ಸಹಕಾರಿ ಸಂಘಗಳು ಪ್ರಾರಂಭವಾಗಲು ಅವರು ಪ್ರಮುಖ ಪಾತ್ರ ವಹಿಸಿದ್ದರು. ಮೀನುಗಾರಿಕೆ ಇಲಾಖೆಯ ಸಚಿವರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಅವರು ಬೈತಖೋಲ ಮೀನುಗಾರಿಕೆ ಬಂದರು ಅಭಿವೃದ್ಧಿ ಅಪಾರವಾಗಿ ಶ್ರಮಿಸಿದ್ದರು.

 ಸಾಗರಮಾಲಾ ಯೋಜನೆ ವಿರೋಧಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಅವರು ಯೋಜನೆ ವಿರೋಧಿಗೆ ಸಂಬಂಧಿಸಿದಂತೆ ಅವರ ನಾಯಕತ್ವ ಮೀನುಗಾರರಲ್ಲಿ ಧೈರ್ಯ ತುಂಬಿತ್ತು.

ಕಾರವಾರ-ಅಂಕೋಲಾ  ಪರ್ಶಿಯನ್  ಬೋಟ್ ಯೂನಿಯನ್ ನ ಸಂಸ್ಥಾಪಕ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಕಾರವಾರದ ಹರಿಕಂತ್ರ-ಖಾರ್ವಿ ಮೀನುಗಾರ ಸಹಕಾರಿ ಸಂಘದ ಅಧ್ಯಕ್ಷರಾಗಿ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.  ಕೆಪಿಸಿಸಿಯ ಮಾಜಿ ಸದಸ್ಯರಾಗಿ ಮತ್ತು ಕಾರವಾರ ತಾಲೂಕಿನ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷರಾಗಿ  ಕಾರ್ಯ ನಿರ್ವಹಿಸಿದ್ದರು. ಮೀನುಗಾರರ ರಾಷ್ಟ್ರೀಯ ಸಂಘಟನೆಯ (NFF) ನ ಕರ್ನಾಟಕ ರಾಜ್ಯದ ಮುಖ್ಯ ಪ್ರವರ್ತಕರಾಗಿ ಅನೇಕ ವಿಚಾರಗಳನ್ನು ಮೀನುಗಾರರ ಪರವಾಗಿ ರಾಷ್ಟ್ರೀಯ ಮಟ್ಟದಲ್ಲಿ ಚರ್ಚಿಸುತ್ತಿದ್ದರು.

ಉತ್ತರ ಕನ್ನಡ ಜಿಲ್ಲೆಯ ಮೀನುಗಾರರ  ಸಂಕಷ್ಟದ ಸಮಯದಲ್ಲಿ ಮುಂಚೂಣಿಯಲ್ಲಿದ್ದು ಅನೇಕ ಸಮಸ್ಯೆಗಳ ವಿರುದ್ಧ ಹೋರಾಡಿದ ಬಹುಮುಖ ವ್ಯಕ್ತಿತ್ವವನ್ನು ಸಮುದಾಯ ಕಳೆದುಕೊಂಡಿರುವುದು ನೋವಿನ ಸಂಗತಿಯಾಗಿದೆ.

ಮಾಜಿ ಸಚಿವ ಪ್ರಭಾಕರ ರಾಣೆ ಅವರ ಅತ್ಯಂತ ಸಮೀಪದ ನಿಕಟವರ್ತಿಗಳಾಗಿದ್ದ ಕೆ ಟಿ ತಾಂಡೇಲ ಎಲ್ಲಾ ಮೀನುಗಾರ ಸಮುದಾಯದವರನ್ನು ಒಗ್ಗೂಡಿಸಿದ್ದರು. ಅದೇ ಅವಧಿಯಲ್ಲಿ ಅವರು ಕಾರವಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅಭಿವೃದ್ಧಿಗೆ ಸಹಕರಿಸಿದವರು.

ಕೆ.ಟಿ.ತಾಂಡೇಲ್ ಅವರ ನಿಧನಕ್ಕೆ ಶಾಸಕ ಸತೀಶ್ ಸೈಲ್, ಮೀನುಗಾರಿಕೆ ಫೆಡರೇಶನ್ ಅಧ್ಯಕ್ಷ ಪ್ರಶಾಂತ ತಾಂಡೇಲ್ , ಹರಿಕಂತ್ರ – ಖಾರ್ವಿ ಮೀನುಗಾರರ ಸಹಕಾರಿ ಸಂಘದ ಉಪಾಧ್ಯಕ್ಷ ರೋಹಿದಾಸ ಬಾನಾವಳಿಕರ ಸೇರಿದಂತೆ ನಿರ್ದೆಶಕರು, ಮೀನುಗಾರ ಸಮುದಾಯದ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.