ಇ ಸಮಾಚಾರ ಡಿಜಿಟಲ್‌ ನ್ಯೂಸ್‌ (esamachara digital news) ಕುಮಟಾ(Karwar) : ಮತದಾರರ ವಿಶೇಷ ಸಮಗ್ರ ಪರಿಷ್ಕಕರಣೆ–2026 (SIR) ಗೆ ಸಂಬಂಧಿಸಿದಂತೆ
ಉತ್ತರ ಕನ್ನಡ(Uttarkannada) ಜಿಲ್ಲೆಯ ಕರಡು ಮತದಾರರ ಪಟ್ಟಿಯನ್ನು ಸೋಮವಾರ ಪ್ರಕಟಿಸಲಾಗಿದೆ.

ಜಿಲ್ಲೆಯಲ್ಲಿ 5,62,004 ಪುರುಷರು, 5,61,014 ಮಹಿಳೆಯರು ಹಾಗೂ 4 ತೃತೀಯ ಲಿಂಗದ ಮತದಾರರು ಸೇರಿದಂತೆ ಕರಡು ಪಟ್ಟಿಯಲ್ಲಿ ಒಟ್ಟು 11,23,022
ಮತದಾರರು ಇದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ(District Election Officer) ಹಾಗೂ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.

ಕರಡು ಮತದಾರರ ಪಟ್ಟಿಯಂತೆ ಹಳಿಯಾಳ(Haliyal) ಕ್ಷೇತ್ರದಲ್ಲಿ 1,67,767, ಕಾರವಾರದಲ್ಲಿ(Karwar) 1,98,962, ಕುಮಟಾದಲ್ಲಿ(Kumta) 1,77,434,
ಭಟ್ಕಳದಲ್ಲಿ(Bhatkal) 2,13,682, ಶಿರಸಿಯಲ್ಲಿ(Sirsi) 1,91,751 ಹಾಗೂ ಯಲ್ಲಾಪುರ(Yallapur) ಕ್ಷೇತ್ರದಲ್ಲಿ 1,73,426 ಮತದಾರರು ಕರಡು
ಪಟ್ಟಿಯಲ್ಲಿ ನಮೂದಾಗಿದ್ದಾರೆ. ಮತಗಟ್ಟೆಗಳ ಪುನರ್‌ವಿಂಗಡಣೆ ಬಳಿಕ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1,523 ಮತಗಟ್ಟೆಗಳು
ಇರಲಿದ್ದು, 78 ಮತಗಟ್ಟೆಗಳು ಹೆಚ್ಚಳವಾಗಿವೆ. ಹಳಿಯಾಳದಲ್ಲಿ 234, ಕಾರವಾರದಲ್ಲಿ 265, ಕುಮಟಾದಲ್ಲಿ 227, ಭಟ್ಕಳದಲ್ಲಿ 273,
ಶಿರಸಿಯಲ್ಲಿ 278 ಹಾಗೂ ಯಲ್ಲಾಪುರದಲ್ಲಿ 246 ಮತಗಟ್ಟೆಗಳಿರಲಿವೆ.

ಮತದಾರರ ಪಟ್ಟಿಯ ಕರಡು ಪ್ರಕಟಣೆಯ ಬಳಿಕ ಮತದಾರರು ತಮ್ಮ ಹೆಸರು, ವಿವರಗಳು ಹಾಗೂ ಪಟ್ಟಿಗೆ ಸಂಬಂಧಿಸಿದಂತೆ
ಆ.24ರಿಂದ ಸೆ.23ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶವಿದೆ. ಸ್ವೀಕರಿಸಲಾದ ಹಕ್ಕು–ಆಕ್ಷೇಪಣೆಗಳ ವಿಲೇವಾರಿ
ಕಾರ್ಯ ಆ.24ರಿಂದ ಅ.22ರವರೆಗೆ ನಡೆಯಲಿದೆ. ಅಂತಿಮ ಮತದಾರರ ಪಟ್ಟಿ ಅ.27ರಂದು ಪ್ರಕಟವಾಗಲಿದೆ.

ಮ್ಯಾಪಿಂಗ್ ಆಗದಿರುವ ಮತದಾರರು ಮತ್ತು ಮ್ಯಾಪಿಂಗ್‌ನಲ್ಲಿ ತಾರ್ಕಿಕ ವ್ಯತ್ಯಾಸ ಹೊಂದಿರುವ ಮತದಾರರಿಗೆ ಹಾಗೂ
ಅಗತ್ಯವಿರುವ ಇತರ ಪ್ರಕರಣಗಳಿಗೆ ಸಂಬಂಧಿಸಿದಂತೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುತ್ತದೆ. ನೋಟಿಸ್‌ಗಳನ್ನು ಬಿಎಲ್‌ಒಗಳ
ಮೂಲಕ ಸಂಬಂಧಪಟ್ಟ ಮತದಾರರಿಗೆ ತಲುಪಿಸಲಾಗುವುದು. ನೋಟಿಸ್ ತಲುಪಿದ ಮತದಾರರು ಖುದ್ದಾಗಿ ವಿಚಾರಣಾ
ದಿನಾಂಕದಂದು ನೋಟಿಸಲ್ಲಿ ನಮೂದಿಸಲಾದ ದಿನಾಂಕ/ಸ್ಥಳದಲ್ಲಿ ಸಮಯಕ್ಕೆ ವಿಚಾರಣೆಗೆ ಹಾಜರಾಗಿ ಸಂಬಂಧಪಟ್ಟ ದಾಖಲೆಗಳನ್ನು
ಸಲ್ಲಿಸಬೇಕಾಗಿರುತ್ತದೆ. ವಿಚಾರಣೆಗೆ ಹಾಜರಾಗದ ಮತದಾರರಿಗೆ ಪುನ: ಇನ್ನೊಂದು ದಿನಾಂಕ ನಿಗಧಿಪಡಿಸಿ ದಾಖಲೆಗಳೊಂದಿಗೆ
ಹಾಜರಾಗಲು ಅವಕಾಶ ನೀಡಲಾಗುವುದು. ಗರಿಷ್ಠ 2 ವಿಚಾರಣಾ ದಿನಾಂಕಗಳನ್ನು ನೀಡಲು ಮಾತ್ರ ಅವಕಾಶ ಇರುತ್ತದೆ.

ಸೆಪ್ಟಂಬರ್ 23 ರ ವರೆಗಿನ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸುವ ಅವಧಿಯಲ್ಲಿ, ದಿನಾಂಕ 01-10-2026 ಕ್ಕೆ 18 ವರ್ಷ
ಪೂರ್ಣಗೊಳಿಸುವ ಅರ್ಹ ನಾಗರೀಕರು ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರ್ಪಡೆಗೊಳಿಸಲು ಅವಕಾಶವಿದ್ದು, ನಮೂನೆ-6 ರೊಂದಿಗೆ
ನಿಗದಿತ ದಾಖಲೆಗಳೊಂದಿಗೆ ಡಿಕ್ಲೇರೇಷನ್ ಫಾರಂ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ಅದೇ ರೀತಿಯಲ್ಲಿ ಹೆಸರನ್ನು ಕಡಿಮೆಗೊಳಿಸಲು
ನಮೂನೆ-7 ಹಾಗೂ ವಿವಿಧ ತಿದ್ದುಪಡಿ ಹಾಗೂ ಹೆಸರನ್ನು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯೊಳಗೆ ಒಂದು ಮತಗಟ್ಟೆಯಿಂದ ಇನ್ನೊಂದು
ಮತಗಟ್ಟೆಗೆ ಅಥವಾ ಒಂದು ವಿಧಾನಸಭಾ ಕ್ಷೇತ್ರದಿಂದ ಇನ್ನೊಂದು ವಿಧಾನಸಭಾ ಕ್ಷೇತ್ರಕ್ಕೆ ಬದಲಾಯಿಸಲು ಸಹ ಅವಕಾಶ ಇರುತ್ತದೆ.
ಮತದಾರರ ಪಟ್ಟಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಭಾರತ ಚುನಾವಣಾ ಆಯೋಗದ ವೆಬ್‌ಸೈಟ್
https://ceokarnataka.gov.in ಹಾಗೂ ಉತ್ತರ ಕನ್ನಡ ಜಿಲ್ಲಾಡಳಿತದ ಅಧಿಕೃತ ವೆಬ್‌ಸೈಟ್
https://uttarakannada.nic.in ಮೂಲಕ ಪರಿಶೀಲಿಸಬಹುದು.

ಸಾರ್ವಜನಿಕರು ಹೆಚ್ಚಿನ ಮಾಹಿತಿ ಅಥವಾ ಸಲಹೆಗಳಿಗಾಗಿ ಜಿಲ್ಲಾ
ಮತದಾರರ ಸಹಾಯವಾಣಿ ಸಂಖ್ಯೆ 1950 (ಟೋಲ್ ಫ್ರೀ ಸಂಖ್ಯೆ) ಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.