ಇ ಸಮಾಚಾರ ಡಿಜಿಟಲ್‌ ನ್ಯೂಸ್‌ (esamachara digital news) ಶಿವಮೊಗ್ಗ(Shivamogga): ಜಿಲ್ಲೆಯ ತೀರ್ಥಹಳ್ಳಿ(Teerthahalli) ತಾಲೂಕಿನ ಕುಡುಮಲ್ಲಿಗೆ ಸಹಕಾರ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (Kudumallige Co-Operative Society CEO) ಮದನ್ ಅವರ ನಿಗೂಢ ನಾಪತ್ತೆ ಪ್ರಕರಣವು ಕೊನೆಗೂ ಸುಖಾಂತ್ಯ ಕಂಡಿದೆ.

ಹೊಸನಗರ(Hosanagar) ತಾಲೂಕಿನ ಜಂಬಳ್ಳಿ ಅರಣ್ಯ(Jamballi Forest) ಪ್ರದೇಶದಲ್ಲಿ ಕಾರು ಹಾಗೂ ಮೊಬೈಲ್ ಬಿಟ್ಟು ನಾಪತ್ತೆಯಾಗಿದ್ದ ಅವರು, ಇದೀಗ ಭಟ್ಕಳದಿಂದ ತೀರ್ಥಹಳ್ಳಿಯ ತಮ್ಮ ಮನೆಗೆ ಸುರಕ್ಷಿತವಾಗಿ ಮರಳಿದ್ದಾರೆ ಎಂದು ಕುಟುಂಬದ ಮೂಲಗಳು ಖಚಿತಪಡಿಸಿವೆ.

ಕಾಡಿನಲ್ಲಿ ಕಾರು ಬಿಟ್ಟು ನಾಪತ್ತೆಯಾಗಿದ್ದ ಸಿಇಒ(CEO) ರಿಪ್ಪನ್‌ಪೇಟೆ(Rippanapete) ಸಮೀಪದ ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಂಬಳ್ಳಿ ಅರಣ್ಯದ ಬಳಿ ಮದನ್ ಅವರ ಕಾರು, ಮೊಬೈಲ್ ಫೋನ್ ಹಾಗೂ ಸೊಸೈಟಿಯ ಲೆಕ್ಕಪತ್ರದ ಪುಸ್ತಕಗಳು ಪತ್ತೆಯಾಗಿದ್ದವು. ನಿಗೂಢ ರೀತಿಯಲ್ಲಿ ವಸ್ತುಗಳನ್ನು ಬಿಟ್ಟು ಅವರು ನಾಪತ್ತೆಯಾಗಿದ್ದರಿಂದ ತೀವ್ರ ಆತಂಕ ಸೃಷ್ಟಿಯಾಗಿತ್ತು. ಕಾರು ಪತ್ತೆಯಾದ ಜಾಗದಲ್ಲಿ ಪೊಲೀಸರು ಹಾಗೂ ಸ್ಥಳೀಯ ಸಾರ್ವಜನಿಕರು ಸೇರಿ ವ್ಯಾಪಕ ಶೋಧ ಕಾರ್ಯ ನಡೆಸಿದ್ದರು. ಈ ನಡುವೆ ಕುಟುಂಬಸ್ಥರು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

ಭ್ರಷ್ಟಾಚಾರದ ಆರೋಪ ಹಾಗೂ ಅನುಮಾನಗಳು: ಕುಡುಮಲ್ಲಿಗೆ ಸಹಕಾರ ಸಂಘದಲ್ಲಿ ಇತ್ತೀಚೆಗೆ ಆರ್ಥಿಕ ಅಕ್ರಮ ಹಾಗೂ ಭ್ರಷ್ಟಾಚಾರ ನಡೆದಿದೆ ಎಂಬ ದೂರುಗಳು ಕೇಳಿಬಂದಿದ್ದವು. ಈ ದೂರುಗಳು ದಾಖಲಾದ ಬೆನ್ನಲ್ಲೇ ಸಿಇಒ ದಿಢೀರ್ ನಾಪತ್ತೆಯಾಗಿದ್ದು ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು.

ಭಟ್ಕಳ ತಲುಪಿದ್ದು ಹೇಗೆ? ತನಿಖೆ ಚುರುಕು : ದಟ್ಟಾರಣ್ಯದಲ್ಲಿ ಕಾರು ಮತ್ತು ಫೋನ್ ಬಿಟ್ಟು ಹೋದ ಮದನ್ ಅವರು ಅಲ್ಲಿಂದ ಭಟ್ಕಳಕ್ಕೆ(Bhatkal) ತೆರಳಿದ್ದು ಹೇಗೆ? ಹಾಗೂ ಅವರ ನಾಪತ್ತೆಯ ಹಿಂದಿನ ಅಸಲಿ ಕಾರಣವೇನು? ಎಂಬುದು ಇನ್ನು ನಿಗೂಢವಾಗಿಯೇ ಉಳಿದಿದೆ. ಅವರು ಮನೆಗೆ ಸುರಕ್ಷಿತವಾಗಿ ವಾಪಸ್ ಬಂದಿದ್ದರೂ, ನಾಪತ್ತೆಯಾದ ಘಟನೆ ಹಾಗೂ ಅದರ ಹಿಂದಿರುವ ಸತ್ಯಾಸತ್ಯತೆಯನ್ನು ಹೊರತರಲು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.