ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal): ಉತ್ತರ ಕನ್ನಡ ಜಿಲ್ಲೆಯ ಭಟ್ಕಳ (Bhatkal)ಪಟ್ಟಣದಲ್ಲಿ ತೀವ್ರ ಪೊಲೀಸ್ ಭದ್ರತೆ ಹಾಗೂ ಸೂಕ್ಷ್ಮ ಕಣ್ಗಾವಲಿನ ನಡುವೆ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನಾ(Ganesh immersion) ಮೆರವಣಿಗೆಯೂ ಭಕ್ತರ ಉತ್ಸಾಹ ಹಾಗೂ ವಿಜೃಂಭಣೆಯಿಂದ ಸಂಪನ್ನಗೊಂಡಿದೆ.
ಮೂರು ದಿನಗಳ ಹಿಂದೆ ಪಟ್ಟಣದಲ್ಲಿ ನಡೆದಿದ್ದ ಕಲ್ಲು ತೂರಾಟದ ಘಟನೆಯ ಹಿನ್ನೆಲೆಯಲ್ಲಿ, ಯಾವುದೇ ಅಹಿತಕರ ಘಟನೆಗಳು ಮರುಕಳಿಸದಂತೆ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಪಟ್ಟಣದಾದ್ಯಂತ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಸಿಸಿಟಿವಿ ಕೆಮರಾಗಳ ಮೂಲಕ ಭದ್ರತೆಯನ್ನು ತೀವ್ರಗೊಳಿಸಲಾಗಿತ್ತು.
ಶುಕ್ರವಾರ ರಾತ್ರಿ ನಡೆದ ವೈಭವೋಪೇತ ಮೆರವಣಿಗೆಯಲ್ಲಿ ಪಟ್ಟಣದ ಪ್ರಮುಖ ಸಾರ್ವಜನಿಕ ಗಣಪತಿ ಮೂರ್ತಿಗಳು ಪಾಲ್ಗೊಂಡಿದ್ದವು: ಆಟೋ ಚಾಲಕ ಹಾಗೂ ಮಾಲಕರ ಸಂಘದ ಗಣೇಶ, ವಿಶ್ವ ಹಿಂದೂ ಪರಿಷತ್ (VHP) ಗಣೇಶ, ಕೆ.ಎಸ್.ಆರ್.ಟಿ.ಸಿ (KSRTC) ಗಣೇಶ, ಮಣ್ಕುಳಿ ಸಾರ್ವಜನಿಕ ಗಣೇಶ ಮೂರ್ತಿ ಮೆರವಣಿಗೆ ನಡೆಯಿತು.
ಚೌಥನಿ ಹೊಳೆಯಲ್ಲಿ ಜಲಸ್ತಂಭನ : ಸಾವಿರಾರು ಭಕ್ತರ ಜಯಘೋಷ ಹಾಗೂ ಸಂಭ್ರಮದ ನಡುವೆ ಸಾಗಿದ ಭವ್ಯ ಮೆರವಣಿಗೆಯ ನಂತರ, ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಚೌಥನಿಯ ಹೊಳೆಯಲ್ಲಿ ಸಾಮೂಹಿಕವಾಗಿ ಜಲಸ್ತಂಭನಗೊಳಿಸಲಾಯಿತು. ಪೊಲೀಸರ ಮುನ್ನೆಚ್ಚರಿಕೆ ಕ್ರಮ ಹಾಗೂ ಸೂಕ್ತ ಆಡಳಿತಾತ್ಮಕ ವ್ಯವಸ್ಥೆಯಿಂದಾಗಿ ವಿಸರ್ಜನಾ ಕಾರ್ಯಕ್ರಮವು ಶಾಂತಿಯುತವಾಗಿ ಮುಕ್ತಾಯಗೊಂಡಿದೆ.