ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಯಲ್ಲಾಪುರ(Yallapur) : ಮನೆಯಿಂದ ನಾಪತ್ತೆಯಾಗಿದ್ದ ವ್ಯಕ್ತಿಯೋರ್ವ ನೇಣಿಗೆ ಕೊರಳೊಡ್ಡಿದ ಘಟನೆ ಯಲ್ಲಾಪುರ ತಾಲೂಕಿನ ಸಹಸ್ರಳ್ಳಿಯ ಕಬ್ಬಿನಕುಳಿಯಲ್ಲಿ ಸಂಭವಿಸಿದೆ.
ಪುಂಡಲಿಕ್ ತುಕಾರಾಮ ಗಾವಡೆ (50) ಮೃತ ದುರ್ದೈವಿಯಾಗಿದ್ದಾರೆ. ಕೃಷಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಪುಂಡಲಿಕ ಗಾವಡೆ ಈ ಬಾರೀ ಮಳೆ ಸರಿಯಾಗಿ ಬೀಳುತ್ತಿಲ್ಲ ಎಂದು ನೊಂದುಕೊಂಡಿದ್ದ. ಹೀಗಾಗಿ ನೋವಿನಲ್ಲಿದ್ದರು. ಅಲ್ಲದೇ ಇಬ್ಬರು ಹೆಣ್ಣು ಮಕ್ಕಳ ಮದುವೆ ಸಹ ಆಗಲಿಲ್ಲ ಎಂಬ ಚಿಂತೆಯಲ್ಲಿದ್ದರು. ತಮ್ಮ ಸಮಸ್ಯೆಗಳ ಬಗ್ಗೆ ಅವರು ತಮ್ಮ ಅಳಿಯನ ಬಳಿ ಹೇಳಿಕೊಂಡಿದ್ದರು ಎನ್ನಲಾಗಿದೆ.
ಮಕ್ಕಳ ಮದುವೆ ಚಿಂತೆ, ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವುದರಿಂದ ಅವರು ದುಡುಕು ನಿರ್ಧಾರ ತೆಗೆದುಕೊಂಡಿದ್ದಾರೆ.
ಅಕ್ಟೋಬರ್ 6ರ ಮಧ್ಯಾಹ್ನದ ಬಳಿಕ ಮನೆಯಿಂದ ಬೆಟ್ಟದ ಕಡೆ ಹೋಗಿದ್ದರು. ಮರಳಿ ಮನೆಗೆ ಬಂದಿರಲಿಲ್ಲ. ಸಾಕಷ್ಟು ಹುಡುಕಿದರೂ ಸುಳಿವು ಸಿಕ್ಕಿರಲಿಲ್ಲ. ಅಕ್ಟೋಬರ್ 9ರಂದು ಕಬ್ಬಿನಗುಳಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಯಲ್ಲಾಪುರ ಪೊಲೀಸರು(Yallapur) ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.