ಮಂಗಳೂರು(MANGLORE) : ಕಳೆದ ಮೂರು ತಿಂಗಳಲ್ಲಿ ಕೊಣಾಜೆ ಪೊಲೀಸ್ ಠಾಣೆ (KONAJE POLICE STATION) ವ್ಯಾಪ್ತಿಯಲ್ಲಿ ನಡೆದ ಕಳ್ಳತನಕ್ಕೆ ಸಂಬಂಧಿಸಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ.
ಮಂಜೇಶ್ವರ ಮೂಲದ ಮಹಮ್ಮದ್ ಸಿಯಾಬ್ ಯಾನೆ ಸಿಯಾ, ಬಜಪೆ ಮೂಲದ ಮಹಮ್ಮದ್ ಅರ್ಪಾಜ್ ಯಾನೆ ಅರ್ಪಾ ಮತ್ತು ಸಪ್ಪಾನ್ ಯಾನೆ ಸಪ್ಪಾ ಬಂಧಿತರಾಗಿದ್ದಾರೆ.
ಬಂಧಿತರಿಂದ ಒಟ್ಟು 12.50 ಲಕ್ಷ ರು. ಮೌಲ್ಯದ ಸೊತ್ತುಗಳನ್ನು ವಶಪಡಿಸಲಾಗಿದೆ. ಈ ಬಗ್ಗೆ ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್ (ANUPAM AGARAWAL) ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಆರೋಪಿಗಳು ಮೂರು ಮನೆಗಳ ಕಳ್ಳತನ ಪ್ರಕರಣಗಳಲ್ಲಿ ಬೀಗ ಹಾಕಿದ ಮನೆಗಳನ್ನು ಒಡೆದು ಒಟ್ಟು 9,25,000 ರೂ. ಮೌಲ್ಯದ ಸೊತ್ತುಗಳನ್ನು ಕದ್ದಿದ್ದರು. ಒಟ್ಟು 130 ಗ್ರಾಂ ತೂಕದ ಚಿನ್ನಾಭರಣ, 1 ವಾಚ್, ಕಾರು ಸೇರಿದಂತೆ ಒಟ್ಟು 12,50,000 ರು. ಮೌಲ್ಯದ ಸೊತ್ತುಗಳನ್ನು ಬಂಧಿತರಿಂದ ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಬಾಡಿಗೆ ಕಾರುಗಳನ್ನು ತೆಗೆದುಕೊಂಡು ಹಗಲು ಹಾಗೂ ರಾತ್ರಿ ಮನೆ ಕಳವು ಮತ್ತು ದರೋಡೆ ನಡೆಸುವ ಪ್ರವೃತ್ತಿಯನ್ನು ಹೊಂದಿದವರಾಗಿದ್ದಾರೆ. ಮೊಹಮ್ಮದ್ ಸಿಯಾಬ್ ನೀಡಿದ ಮಾಹಿತಿಯಂತೆ ಸಜಿಪದ ನಿವಾಸಿ ಮೊಹಮ್ಮದ್ ಜಂಶೀರ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಕಮಿಷನರ್ ತಿಳಿಸಿದರು.
ಆರೋಪಿ ಮಹಮ್ಮದ್ ಸಿಯಾಬ್ (30) ವಿರುದ್ಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದಾನೆ. ಈತನ ಮೇಲೆ ಸುಮಾರು 13 ಪ್ರಕರಣಗಳಿವೆ. ಕೊಣಾಜೆ ಠಾಣೆಯಲ್ಲಿ 4 ದರೋಡೆ ಮತ್ತು ಮನೆ ಕಳ್ಳತನ ಪ್ರಕರಣ, ಉಳ್ಳಾಲ ಠಾಣೆಯಲ್ಲಿ ಕೊಲೆಯತ್ನ ಹಾಗೂ ಮಾದಕ ವಸ್ತು ಮಾರಾಟ 2 ಪ್ರಕರಣ, ಬಜಪೆ ಠಾಣೆಯಲ್ಲಿ 2 ಮನೆ ಕಳ್ಳತನದ ಪ್ರಕರಣ, ಕಡಬ ಠಾಣೆಯಲ್ಲಿ 1 ಹನಿಟ್ರ್ಯಾಪ್ ಪ್ರಕರಣ, ಕೇರಳ ರಾಜ್ಯದ ಕುಂಬ್ಳೆ ಠಾಣೆಯಲ್ಲಿ 3 ಮನೆ ಕಳ್ಳತನ ಪ್ರಕರಣ, ಮಂಜೇಶ್ವರ ಠಾಣೆಯಲ್ಲಿ 1 ಮನೆ ಕಳ್ಳತನ ಪ್ರಕರಣ ದಾಖಲಾಗಿದೆ.
ಆರೋಪಿ ಮಹಮ್ಮದ್ ಅರ್ಪಾಜ್ (19) ಮೇಲೆ ಬಜಪೆ ಠಾಣೆ, ಮಂಜೇಶ್ವರ ಠಾಣೆ ಹಾಗೂ ಹಾಸನ ಗ್ರಾಮಂತರ ಠಾಣೆಯಲ್ಲಿ ಪ್ರಕರಣ ಸೇರಿ ಒಟ್ಟು 3 ಪ್ರಕರಣ ದಾಖಲಾಗಿದೆ.
ಆರೋಪಿ ಸಪ್ಪಾನ್ (20) ಮೇಲೆ ಕಡಬ ಠಾಣೆಯಲ್ಲಿ 1 ಮನೆ ಕಳ್ಳತನ ಪ್ರಕರಣ ದಾಖಲಾಗಿರುತ್ತದೆ. ಆರೋಪಿ ಮೊಹಮ್ಮದ್ ಜಂಶೀರ್ (27) ಮೊದಲ ಬಾರಿ ಕೃತ್ಯದಲ್ಲಿ ಭಾಗಿಯಾಗಿದ್ದು ಮಂಜೇಶ್ವರ ಠಾಣೆ, ಹಾಸನ ಗ್ರಾಮಂತರ ಠಾಣೆ ಸೇರಿ ಒಟ್ಟು 3 ಪ್ರಕರಣ ದಾಖಲಾಗಿದೆ.
ಆರೋಪಿ ಸಪ್ಪಾನ್ (20) ಮೇಲೆ ಕಡಬ ಠಾಣೆಯಲ್ಲಿ 1 ಮನೆ ಕಳ್ಳತನ ಪ್ರಕರಣ ದಾಖಲಾಗಿರುತ್ತದೆ. ಆರೋಪಿ ಮೊಹಮ್ಮದ್ ಜಂಶೀರ್ (27) ಮೊದಲ ಬಾರಿ ಕೃತ್ಯದಲ್ಲಿ ಭಾಗಿಯಾಗಿದ್ದಾನೆ.
ಆರೋಪಿಗಳು ಮಂಗಳೂರು ನಗರ ಮತ್ತು ದ.ಕ. ಜಿಲ್ಲೆ ಉಡುಪಿ, ಹಾಸನ ಹಾಗೂ ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ಮನೆ ಕಳ್ಳತನ ಹಾಗೂ ದರೋಡೆ ನಡೆಸಿರುವ ಬಗ್ಗೆ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ.
ಕೊಣಾಜೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರವೀಂದ್ರ, ಪಿಎಸ್‌ಐ ವಿನೋದ್, ಎಎಸ್‌ಐಗಳಾದ ಜಗನ್ನಾಥ ಶೆಟ್ಟಿ ಮತ್ತು ಸಂಜೀವ್, ಸಿಬ್ಬಂದಿಗಳಾದ ರಾಮ ನಾಯ್ಕ, ರೇಷ್ಮಾ, ಅಪರಾಧ ಪತ್ತೆ ವಿಭಾಗದ ಸಿಬ್ಬಂದಿಗಳಾದ ಡೇವಿಡ್ ಡಿಸೋಜಾ, ಸಂತೋಷ್, ಬಸವನಗೌಡ, ಸುರೇಶ್ ತಲವಾರ, ದರ್ಶನ್, ಪ್ರಶಾಂತ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.